ವಾಡಿ: ಲಂಬಾಣಿ ಜನಾಂಗದ ಧರ್ಮಗುರು ಸಂತ ಶ್ರೀಸೇವಾಲಾಲ ಮಹಾರಾಜರ ಬದುಕಿನ ಕುರಿತು ೧ನೇ ತರಗತಿಯಿಂದ ಪಿಎಚ್‌ಡಿ ವರೆಗಿನ ಪಠ್ಯಗಳಲ್ಲಿ ಕನಿಷ್ಟ ಒಂದು ಪುಟದಷ್ಟೂ ಮಾಹಿತಿಯಿಲ್ಲ. ದೇಶದಲ್ಲಿ ಆರು ಕೋಟಿ ಜನಸಂಖ್ಯೆಯಿದ್ದರೂ ಕೇಂದ್ರದಲ್ಲಿ ಬಂಜಾರಾ ಸಮುದಾಯಕ್ಕೆ ಮಂತ್ರಿ ಸ್ಥಾನವಿಲ್ಲ ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬಂಜಾರಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಸಂತ ಶ್ರೀಸೇವಾಲಾಲ ಮಹಾರಾಜರ ೨೮೧ನೇ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಅಪರಾಧಿ ಜನಾಂಗ ಎಂದು ಘೋಷಿಸಿ ಕಾನೂನು ಪಾಸ್ ಮಾಡಿದ್ದ ಬ್ರಿಟೀಷ್ ಸರಕಾರ, ಆರು ವರ್ಷದಲ್ಲಿ ಹತ್ತು ಸಾವಿರ ಲಂಬಾಣಿಗರನ್ನು ಗಲ್ಲಿಗೇರಿಸಿತ್ತು. ಬ್ರಿಟೀಷರ ಹಿಂಸಾತ್ಮಕ ಧೋರಣೆ ಮತ್ತು ಕ್ರೂರ ದಬ್ಬಾಳಿಕೆಗೆ ನಲುಗಿದ್ದ ಬಂಜಾರಾ ಜನಾಂಗವನ್ನು ಅಂದು ಕಾಪಾಡಿದ್ದು ಸೇವಾಲಾಲ ಮಹಾರಾಜರು. ಬಸವಾದಿ ಶರಣರು ದಾಖಲಿಸಿರುವ ವಚನ ಚಿಂತನೆಗಳಂತೆ ಸೇವಾಲಾಲ ಮಹಾರಾಜರೂ ಕೂಡ ತಮ್ಮದೆ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಲಂಬಾಣಿ ಸುಮುದಾಯಕ್ಕೆ ಭಾಷೆಯಿದ್ದು ಲಿಪಿ ಇಲ್ಲದ ಕಾರಣ ಅವು ದಾಖಲಾಗಿಲ್ಲ. ಇಂಥಹ ಮಹಾನ್ ಸಂತನ ಬದುಕು ಪಠ್ಯಗಳಲ್ಲಿ ಅಳವಡಿಸದೆ ಸರಕಾರಗಳು ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿವೆ ಎಂದು ಆರೋಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಬಂಜಾರಾ ಸಮುದಾಯದ ಡಾ.ಉಮೇಶ ಜಾಧವ ಅವರನ್ನು ಸಂಸದ ಮಾಡಲು ಮಾಲಿಕಯ್ಯ ಗುತ್ತೇದಾರ ಮತ್ತು ನಾನು ಜೋಡೆತ್ತಿನಂತೆ ದುಡಿದಿದ್ದೇವೆ. ಸರಳ ವ್ಯಕ್ತಿತ್ವದ ಡಾ.ಉಮೇಶ ಜಾಧವ ಪ್ರಥಮ ಬಾರಿಗೆ ಹತ್ತು ಸಾವಿರ ಜನರನ್ನು ವಿಸೇಷ ರೈಲಿನಲ್ಲಿ ಕರೆದೊಯ್ದು ದೇಹಲಿ ಸಂಸತ್ ಭವನದ ಮುಂದೆ ಸೇವಾಲಾಲ ಜಯಂತಿ ಮಾಡುತ್ತಿದ್ದಾರೆ. ಸಂಸದ ಡಾ.ಜಾಧವಗೆ ಕೇಂದ್ರ ಮಂತ್ರಿಯಾಗುವ ಕಾಲ ಸನ್ನಿಹಿತವಾಗಿದ್ದು, ಅವರನ್ನು ಕೇಂದ್ರ ಮಂತ್ರಿ ಮಾಡುವ ವರೆಗೂ ನಿದ್ರೆ ಮಾಡುವುದಿಲ್ಲ. ಮುಖ್ಯಂತ್ರಿಗಳಿಂದ ಸೇವಾಲಾಲ ಭವನಕ್ಕೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡುವ ಮೂಲಕ ಸೇರಿದ್ದ ಸಾವಿರಾರು ಜನರಿಂದ ಚೆಪ್ಪಾಳೆಗಿಟ್ಟಿಸಿಕೊಂಡರು.
ಕಂಬಳೇಶ್ವರ ಮಠದ ಶ್ರೀಸೋಮಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಳಕರ್ಟಿ ಮಠದ ಶ್ರೀಮುನೀಂದ್ರ ಸ್ವಾಮೀಜಿ, ಯಲ್ಲಾಲಿಂಗ ಆಶ್ರಮದ ಶ್ರೀಜೇಮಸಿಂಗ್ ಮಹಾರಾಜ, ಅಳ್ಳೊಳ್ಳಿಯ ಶ್ರೀನಾಗಪ್ಪಯ್ಯ ಸ್ವಾಮೀಜಿ, ಹಳಕರ್ಟಿ ದರ್ಗಾ ಶರೀಫ್ ಅಬುತುರಾಬಶಹಾ ಖ್ವಾದ್ರಿ, ಯರಗೋಳ ಶ್ರೀ, ಶ್ರೀಠಾಕೂರ ಮಹಾರಾಜ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಮೈನಾಬಾಯಿ ಜಿ.ರಾಠೋಡ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಶಾಸಕ ಡಾ.ಅವಿನಾಶ ಜಾಧವ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಚಿತ್ರನಟಿ ತನುಜಾ ಪವಾರ, ಪಿಎಸ್‌ಐ ವಿಜಯಕುಮರ ಭಾವಗಿ, ಸಂಗೀತಾ ಎಲ್.ಪವಾರ, ಜಿಪಂ ಸದಸ್ಯೆ ಸೋನಿಬಾಯಿ ಚವ್ಹಾಣ, ಎಸಿಸಿ ಮುಖ್ಯಸ್ಥ ಕೆ.ಆರ್.ರೆಡ್ಡಿ, ಮುಖಂಡರಾದ ಡಾ.ರಾಮು ಪವಾರ, ಸದಾಶಿವ ಕಟ್ಟಿಮನಿ, ನೀಲಯ್ಯಸ್ವಾಮಿ ಮಠಪತಿ, ಸಿದ್ದಣ್ಣ ಕಲಶೆಟ್ಟಿ, ಬಸವರಾಜ ಪಂಚಾಳ, ರಮೇಶ ಕಾರಬಾರಿ, ತುಕಾರಾಮ ರಾಠೋಡ, ಈಶ್ವರ ರಾಠೋಡ, ಗಣೇಶ ಚವ್ಹಾಣ, ನಾಮದೇವ ಚವ್ಹಾಣ, ರಾಮು ರಾಠೋಡ ಪಾಲ್ಗೊಂಡಿದ್ದರು. ಸುರೇಶ ರಟೊಡ ನಿರೂಪಿಸಿದರು. ದೇವಜಿ ನಾಯಕ ವಂದಿಸಿದರು.
ಪ್ರತಿಭಾವಂತ ಬಂಜಾರಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಪಟ್ಟಣದಾದ್ಯಂತ ನಡೆದ ಸೇವಾಲಾಲ ಮಹಾರಾಜರ ಭವ್ಯ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ತಾಂಡಾಗಳ ಸಾವಿರಾರು ಜನರು ಪಾಲ್ಗೊಂಡಿದ್ದರು. ಮೊಳಕೆಯೊಡೆದ ಸಸಿಗಳನ್ನು ಹೊತ್ತು ಸಾಗಿದ ಲಂಬಾಣಿ ಯುವತಿಯರು ಹಾಗೂ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಮಹಿಳೆಯರು ಮೆರವಣಿಗೆಯ ಆಕರ್ಷಣೆಯಾಗಿದ್ದರು.