ಕಲಬುರಗಿ: ಬಸವಾದಿ ಶರಣರು ತಾವು ಮಾಡಿರುವ ಅಮೋಘವಾದ ಕಾರ್ಯವನ್ನು ಅನುಭವದ ರೂಪದಲ್ಲಿ ರಚಿಸಿರುವ ವಚನಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮಲ್ಲಿರುವ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ದೂರಾಗಿ ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆಯೆಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ಆರ್ಶೀವಾದ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಆಳಂದ ಕಾಲೊನಿ ಘಟಕನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಮಹಾಸಭಾವು ಆರಂಭದಿಂದಲೂ ಸಾಕಷ್ಟು ತೊಂದರೆ, ಧರ್ಮ ವಿಭಜನೆ ಮಾಡುತ್ತಿದ್ದಾರೆಂದ ಅಪಪ್ರಚಾರವನ್ನು ಎದುರಿಸುತ್ತಾ ಬಂದಿದೆ. ಇಲ್ಲಿ ಧರ್ಮ ವಿಭಜನೆ ಪ್ರಶ್ನೆ ಉದ್ಭವಿಸುವುದಿಲ್ಲ. ವಿಶ್ವಗುರು ಬಸವಣ್ಣನವರು ಕಳೆದ ೯೫೦ ವರ್ಷಗಳ ಹಿಂದೆಯೆ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪಿಸಿದ್ದಾರೆ. ಅದಕ್ಕೆ ಈಗ ಕಾನೂನಾತ್ಮಕ ಹೋರಾಟ ಜರುಗುತ್ತಿದ್ದು, ಅದಕ್ಕೆ ಪೂರಕವಾದ ಎಲ್ಲಾ ದಾಖಲಾತಿಗಳಿದ್ದು, ಶೀರ್ಘದಲ್ಲಿಯೇ ಮಾನ್ಯತೆ ದೊರೆಯುತ್ತದೆಯೆಂದು ಆಶಯ ವ್ಯಕ್ತಪಡಿಸಿದರು.
ಲಿಂಗಾಯತ ಸ್ವತಂತ್ರ ಧರ್ಮ ದಾಖಲಾತಿಯ ಸಾಕ್ಷಿಗಳು, ಮೈಸೂರು ರಾಜ್ಯದ ಹಳೆ ಜನಗಣತಿಗಳು ಲಿಂಗಾಯತ ಮತ್ತು ಚಾತುರ್ವಣ ನಂಬಿಕೆ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕ, ಪ್ರಗತಿಪರ ಚಿಂತಕ ಡಾ.ಲಕ್ಷ್ಮಣ ಕೌಂಟೆ, ಏನಾದರೂ ಆಗಬಹುದು ಲಿಂಗಾಯತರಾಗುವುದು ಕಷ್ಟ. ಶೇಕಡಾವಾರು ಲಿಂಗಾಯತರಾಗುವುದಕ್ಕಿಂತ ನಮ್ಮ ದೇಶದ ಮೂಲ ನಿವಾಸಿಗಳನ್ನು ಒಳಗೊಂಡ ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದಾರೆ. ಧರ್ಮದ ಗ್ರಂಥವಾದ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ, ಅತ್ಯಂತ ಪ್ರಾಮಾಣಿಕ, ಕಾಯಕ ನಿಷ್ಠರಾಗಿ, ಸರ್ವರನ್ನು ಅಪ್ಪಿಕೊಳ್ಳುವ ಮನೋಭಾವನೆ ಹೊಂದಿದವರು ಮಾತ್ರ ನೈಜ ಲಿಂಗಾಯತರಾಗಲು ಸಾಧ್ಯವಿದೆ. ಲಿಂಗಾಯತದಲ್ಲಿ ಜನಿಸಿದ ಮಾತ್ರಕ್ಕೆ ಲಿಂಗತ್ವ ಗುಣ ಬರುವುದಿಲ್ಲ. ಬದಲಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಮಾತನಾಡಿ, ಶರಣ ತತ್ವವನ್ನು ಎಲ್ಲೆಡೆ ಪಸರಿಸುವ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಿರಂತರವಾಗಿ ಹೋರಾಟ ಮಾಡುವ ಉದ್ದೇಶದಿಂದ ನಮ್ಮ ಮಹಾಸಭಾ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ರಾಜ್ಯಾದಂತ ತನ್ನ ಘಟಕಗಳನ್ನು ಹೊಂದಿದ್ದು, ನಗರದಲ್ಲಿ ವಿವಿದೆಡೆ ಮಹಾಸಭಾದ ಘಟಕಗಳನ್ನು ಅಸ್ಥಿತ್ವಕ್ಕೆ ತರಲಾಗುತ್ತಿದ್ದು, ಇಂದು ಆಳಂದ ಕಾಲೊನಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ, ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು.
ಆರ್ಶೀವಾದ ಕಲ್ಯಾಣ ಮಂಟಪದ ಮಾಲಿಕರಾದ ಪ್ರಲ್ಹಾದಸಿಂಗ್ ಠಾಕೂರ ಧ್ವಜಾರೋಹಣ ನೆರವೇರಿಸಿದರು. ಜಿಪಂ ಸದಸ್ಯ ಸಂತೋಷ ಪಾಟೀಲ ದಣ್ಣೂರ, ಪಾಲಿಕೆ ಮಾಜಿ ಸದಸ್ಯ ಮಹೇಶ ಪಟ್ಟಣ, ಆಳಂದ ಕಾಲೊನಿ ಘಟಕದ ಗೌರವ ಅಧ್ಯಕ್ಷೆ ನಳಿನಿ ಪಿ.ಮಹಾಗಾಂವಕರ್, ಪ್ರಧಾನ ಕಾರ್ಯದರ್ಶಿ ರಾಜಶೇಖರ ಬಿ.ಮರಡಿ ಸೇರಿದಂತೆ ಆಳಂದ ರಸ್ತೆಯ ವಿವಿಧ ಬಡಾವಣೆ ಸೇರಿದಂತೆ ನಗರದ ವಿವಿಧ ಬಡವಾಣೆಯ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಗೀತಾ ಕಾಡಾದಿ, ದೀಪಾಲಿ ಬಿರಾದಾರ, ಜಗದೇವಿ ಚಕ್ಕಿ ಪ್ರಾರ್ಥಿಸಿದರು. ಜಗದೀಶ ಪಾಟೀಲ ಸ್ವಾಗತಿಸಿದರು. ಸಿದ್ದರಾಮ ಯಳವಂತಗಿ ನಿರೂಪಿಸಿದರು. ರೇವಣಸಿದ್ದಪ್ಪ ನಾಗೋಜಿ ವಂದಿಸಿದರು.