ಕಲಬುರಗಿ: ಪ್ರಚೋದನಕಾರಿ ಭಾಷಣ ಮಾಡಿದ ಸಂಬಂಧ ಎಐಎಂಐಎಂ ಪಕ್ಷದ ಮುಖಂಡ ಮಹಾರಾಷ್ಟ್ರದ ಮಾಜಿ ಶಾಸಕ ವಾರಿಸ್ ಪಠಾಣ್ಗೆ ವಿಚಾರಣೆಗೆ ಹಾಜರಾಗುವಂತೆ ಪೋಲಿಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಫೆ.15ರಂದು ಕಲಬುರಗಿಯ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆ, ಕಲಬುರಗಿ ಗ್ರಾಮೀಣ ಪೊಲೀಸರಿಂದ ನೋಟಿಸ್ ಜಾರಿ ಮಾಡಿರುವುದಾಗಿ ನಗರ ಪೋಲಿಸ್ ಆಯುಕ್ತ ಎಂ.ಎನ್.ನಾಗರಾಜ್ ತಿಳಿಸಿದ್ದಾರೆ.
ನೋಟಿಸ್ ನೀಡಲು ಪೋಲಿಸರು ಮಹಾರಾಷ್ಟ್ರಕ್ಕೆ ತೆರಳಿದ್ದು. ಫೆಬ್ರವರಿ 29ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಪಠಾಣ್ ಜೊತೆಗೆ ಕಾರ್ಯಕ್ರಮ ಆಯೋಜಕರನ್ನೂ ವಿಚಾರಣೆಗೆ ಒಳಪಡಿಸುವುದಾಗಿ ನಾಗರಾಜ್ ಮಾಹಿತಿ ನೀಡಿದರು.
ಅದೇ ರೀತಿ ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಎಐಎಂಐಎಂನ ಮುಖಂಡ ಗುರುಶಾಂತ ಪಟ್ಟೇದಾರ್ಗೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ನಡೆದ ಪೌರತ್ವ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ಕಲಬುರಗಿಯ ಎಐಎಂಐಎಂ ಮುಖಂಡ ಗುರುಶಾಂತ ಪಟ್ಟೇದಾರ್ ಅವರಿಗೂ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಅಮೂಲ್ಯ ಪಾಕ್ ಪರ ಘೋಷಣೆ ಕೂಗುವ ಐದು ನಿಮಿಷಗಳ ಮುಂಚೆ ಪಟ್ಟೇದಾರ್ ಭಾಷಣ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ನಾಳೆ ಖುದ್ದು ಹಾಜರಾಗಿ ಪೊಲೀಸರಿಗೆ ವಿವರಣೆ ನೀಡಲಿರೋದಾಗಿ ಪಟ್ಟೇದಾರ್ ತಿಳಿಸಿದ್ದಾರೆ