ಜೂಜು ಕೇಂದ್ರ (ಕ್ಯಾಸಿನೋ) ತೆರೆಯಲು ಅನುಮತಿ ನೀಡುವ ಕ್ರಮಕ್ಕೆ AIDYO ವಿರೋಧ

0
54

ಕಲಬುರಗಿ: ರಾಜ್ಯ ಸರಕಾರ ಜೂಜು ಕೇಂದ್ರ ತೆರೆಯುವ ಪ್ರಸ್ತಾಪಕ್ಕೆ ಮುಂದಾಗಿರುವುದು ಅತ್ಯಂತ ಬೇಜವಾಬ್ದಾರಿಯುತ ಹಾಗೂ ಯುವಜನವಿರೋಧಿ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಕ್ರಮವೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ಜಿಲ್ಲಾ ಸಮತಿಯ ಅಧ್ಯಕ್ಷ  ನಿಂಗಣ್ಣ ಜಂಬಗಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಎಐಡಿವೈಓ ಜಿಲ್ಲಾ ಅಧ್ಯಕ್ಷ ನಿಂಗಣ್ಣ ಜಂಬಗಿ, ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಎಚ್ ಅವರು  ಬಾಯ ಪ್ರಚಾರಕ್ಕೆ ’ಜನರ ಹಿತವನ್ನು ಗಮನದಲ್ಲಿಟ್ಟಕೊಂಡು’ ಎಂದು ಹೇಳುತ್ತಲೇ ರಾಜ್ಯ ಸರ್ಕಾರವು ತನ್ನ ಆದಾಯದ ಮೇಲೆ ಕಣ್ಣಿಟ್ಟಿದೆ. ಈ ರೀತಿ ಜೂಜು ಕೇಂದ್ರಗಳನ್ನು ತೆರೆಯಲು ಅವಕಾಶ ಕೊಡುವುದು ರಾಜ್ಯದಲ್ಲಿ ಅಪರಾಧಗಳು ಹೆಚ್ಚಾಗಲು ಕುಮ್ಮಕ್ಕು ನೀಡಿದಂತಾಗುತ್ತದೆ.  ’ಕ್ಯಾಸಿನೋ’ ಆರಂಭವಾದ ೩ ವರ್ಷಗಳಲ್ಲಿ ಆಸ್ತಿ ಕುರಿತ ಅಪರಾಧಗಳು ಶೇ.೮ರಷ್ಟು ಹೆಚ್ಚಳವಾಗಿದೆ ಎಂದು ಹಾಗೂ ಹಿಂಸಾತ್ಮಕ ಅಪರಾಧಗಳ ಸಂಖ್ಯೆಯಲ್ಲಿ ಶೇ.೧೦ರಷ್ಟು ಹೆಚ್ಚಳವಾಗಿದೆ ಎಂದು ಅಮೇರಿಕದ ನೆವಾಡದ ಅಧ್ಯಯನ ಸಂಸ್ಥೆಗಳ ವರದಿಗಳು ಹೇಳುತ್ತವೆ. ಹಲವಾರು ಜನ ತಜ್ಞರು ಈ ಜೂಜಿನಿಂದಾಗಿ ದಿವಾಳಿತನ, ಆತ್ಮಹತ್ಯೆ, ಹಣದ ಕಳ್ಳ ಸಾಗಾಣಿಕೆ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Contact Your\'s Advertisement; 9902492681

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲವಿದೆ. ಹಲವು ಜಿಲ್ಲೆಗಳ ಜನರು ಪ್ರವಾಹದಿಂದ ಇನ್ನೂ ಚೇತರಿಸಿಕೊಂಡಿಲ್ಲ. ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಿರುದ್ಯೋಗದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗಿದೆ. ೨೦೧೮ರಲ್ಲಿ ಪ್ರತಿದಿನ ದೇಶದಲ್ಲಿ ೩೬ ಮಂದಿ ನಿರುದ್ಯೋಗಿಗಳು ಮತ್ತು ೩೫ ಮಂದಿ ಸ್ವದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಇತ್ತಿಚಿನ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಹೇಳುತ್ತದೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಬಿಟ್ಟು ಜನರಿಗಾಗಿ ಏನೋ ಘನಕಾರ್ಯ ಮಾಡುತ್ತಿದ್ದೇವೆ ಎನ್ನುವಂತೆ  ಪ್ರವಾಸೋದ್ಯಮ ಸಚಿವರು ಹೇಳಿಕೊಂಡಿರುವುದು ಖಂಡನೀಯ ಎಂದು ಸಂಘಟನೆಯ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಶಾಲಾ ಮಕ್ಕಳಿಗೆ ಬಿಸಿ ಊಟಕ್ಕಾಗಿ ಸಂಪನ್ಮೂಲ ಕ್ರೂಡಿಕರಿಸಲು ಎಂದು ನೆಪ ಹೇಳಿ ಎಸ್.ಎಂ.ಕೃಷ್ಣ ಸರ್ಕಾರ ಆನ್ಲೈನ್ ಲಾಟರಿ ಎಂಬ ಜೂಜನ್ನು ಆರಂಭಿಸಿತ್ತು. ಅದನ್ನು ರಾಜ್ಯದ ಜನತೆ ಕ್ಷಮಿಸಲಿಲ್ಲ. ಈ ಲಾಟರಿಯಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳವಾಯಿತು. ಅದರಲ್ಲೂ ಕೊಲೆ, ಸುಲಿಗೆ, ಕಳ್ಳತನ ಮತ್ತು ಈ ಲಾಟರಿ ಆಡುವ ಯುವಕರ ಆತ್ಮಹತ್ಯೆ ಸಂಖ್ಯೆ ಏರಿಕೆಯಾಯಿತು.

ಈ ಬಗ್ಗೆ ಬೆಂಗಳೂರಿನ ನಿಮ್ಹಾನ್ಸ್ ಸಹ ಜೂಜು ಮತ್ತು ಅಪರಾಧಗಳ ನಡುವಿನ ಸಂಬಂಧದ ಬಗ್ಗೆ ವರದಿಯನ್ನು ನೀಡಿತ್ತು. ರಾಜ್ಯದಾದ್ಯಂತ ಹೋರಾಟ ಬೆಳೆದ ಹಿನ್ನೆಲೆಯಲ್ಲಿ ಧರ್ಮಸಿಂಗ್ ಸರ್ಕಾರ ಆನ್ಲೈನ್ ಲಾಟರಿ ಸೇರಿದಂತೆ ಎಲ್ಲಾ ತರಹದ ಪೇಪರ್ ಲಾಟರಿಗಳ ಮೇಲೆ ನಿಷೇಧವನ್ನು ಹೇರಿತು.ಆದ್ದರಿಂದ, ಇತಿಹಾಸದಿಂದ ಪಾಠ ಕಲಿತು ರಾಜ್ಯ ಸರ್ಕಾರವು ಈ ಕೂಡಲೇ ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ಯುವಜನರ ನೈಜಹಿತವನ್ನು ಗಮನದಲ್ಲಿರಿಸಿಕೊಂಡು, ಜೂಜನ್ನು ಉತ್ತೇಜಿಸುವಂತಹ ಸಮಾಜಕ್ಕೆ ಮಾರಕವಾಗಿರುವ ಕ್ಯಾಸಿನೋ ತೆರೆಯುವ ಕೆಲಸಕ್ಕೆ ಕೈಹಾಕದೆ, ಈ ನಿರ್ಧಾರವನ್ನು ಕೂಡಲೆ ಕೈಬಿಡಬೇಕೆಂದು ಎಐಡಿವೈಓ ಆಗ್ರಹಿಸುತ್ತದೆ. ಜನರು ಇಂತಹ ಕುತ್ಸಿತ ನೀತಿಗಳ ವಿರುದ್ಧ ಹೋರಾಡಲು ಮುಂದೆ ಬರಬೇಕೆಂದು ಕಲಬುರಗಿ  ಎಐಡಿವೈಓ ಜಿಲ್ಲಾ ಸಮಿತಿ ಯುವಜನರಿಗೆ  ಕರೆ ನೀಡುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here