ಕಲಬುರಗಿ: ರಾಜ್ಯ ಮಟ್ಟದ ‘ಕದಂಬ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕದಂಬರ ನೆನಪಿನಲ್ಲಿ ಪ್ರತಿ ವರ್ಷ ಕದಂಬ ಉತ್ಸವ ಮತ್ತು ಪ್ರಶಸ್ತಿ ನೀಡುತ್ತ ಬಂದಿದ್ದು, ವಿಶ್ವ ಕನ್ನಡಿಗರು ಮೆಚ್ಚುವಂಥ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಕದಂಬ ಪ್ರಶಸ್ತಿಗೆ ಈ ವರ್ಷ ಲೇಖಕ ಮಹಿಪಾಲರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಅವರು, ಕಳೆದ ೧೧ ವರ್ಷಗಳಿಂದ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ಹಿರಿಮೆಯನ್ನು ಕಾಯುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಹಮ್ಮಿಕೊಳ್ಳುವ ೧೨ ನೇ ವರ್ಷದ ರಾಜ್ಯ ಸಮಾವೇಶ ಮತ್ತು ಸುಗ್ಗಿ ಸಂಭ್ರಮ ಫೆ.೨೯ ರಂದು ನಡೆಯಲಿದೆ. ಅದ್ದೂರಿಯಾಗಿ ಕನ್ನಡಿಗರ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.
ಕಳೆದ ೩೦ ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಮಹಿಪಾಲರೆಡ್ಡಿ, ಇದೂವರೆಗೆ ೩೮ ಕೃತಿಗಳನ್ನು ಬರೆದಿದ್ದಾರೆ. ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ಬಹುಮುಖಿ ಕ್ಷೇತ್ರದಲ್ಲಿ ಕನ್ನಡದ ಸೇವೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ಕಂಪನ್ನು ಬೀರಿದ ಕದಂಬರ ಗೌರವ ಸೂಚಕವಾಗಿ ನೀಡುವ ಕದಂಬ ಪ್ರಶಸ್ತಿಗೆ ಮಹಿಪಾಲರೆಡ್ಡಿ ಅವರನ್ನು ಆಯ್ಕೆ ಮಾಡಿದ್ದು, ಫೆ.೨೯ ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.