ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಸಂಸ್ಥೆಗೆ ಸುವರ್ಣ ಮಹೋತ್ಸವದ ಸಂಭ್ರಮ

0
66

ಶಹಾಬಾದ: ಜಿಲ್ಲೆಯ ಔದ್ಯೋಗಿಕ ನಗರವೆಂದೇ ಹೆಸರಾದ ಶಹಾಬಾದ ನಗರದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ತೆರೆದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಸಂಸ್ಥೆಗೆ ೫೦ ವರ್ಷಗಳಾದರೆ,ಅದರ ಅಡಿಯಲ್ಲಿ ನಡೆಯುತ್ತಿರುವ ಗಂಗಮ್ಮ.ಎಸ್.ಮರಗೋಳ ಕನ್ಯಾ ಪ್ರೌಢಶಾಲೆಗೆ ೫೦ ವರ್ಷ ಪೂರೈಸಿ ಸುವರ್ಣ ಮಹೋತ್ಸವ ಆಚರಿಸಲು ಸಜ್ಜಾಗಿ ನಿಂತಿದೆ. ಐದು ದಶಕಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅದೂ ಕನ್ನಡ ಮಾಧ್ಯಮದಲ್ಲಿ ತನ್ನದೇ ಆದ ರೀತಿಯಲ್ಲಿ ಅಳಿಲು ಸೇವೆ ಸಲ್ಲಿಸುತ್ತ ಶಹಾಬಾದ ಹಾಗೂ ಚಿತ್ತಾಪೂರ ತಾಲೂಕಾವಲ್ಲದೇ ಇಡೀ ಕಲಬುರಗಿ ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ಬೆಳೆದು ನಿಂತು ಇದೇ ಫೆಬ್ರವರಿ ೨೯ ರಂದು ಸುವರ್ಣ ಹಬ್ಬವನ್ನು ಆಚರಿಸಲು ಸಿದ್ಧವಾಗಿದೆ.

ನಗರದ ಉದ್ಯಮದಾರರಾದ ವೀರಪ್ಪ ಇಂಗಳೇಶ್ವರ, ಚನ್ನಪ್ಪ ಇಂಗಿನಶೆಟ್ಟಿ, ಗುರುಬಸಪ್ಪ ಗೊಳೇದ್,ಶಾಂತವೀರಪ್ಪ ಮಟ್ಟತ್ತಿ, ಶಾಂತಪ್ಪಮಲ್ಲಪ್ಪ ಮರಗೋಳ, ರೇವಣಸಿದ್ದಪ್ಪ ಕೋಬಾಳ, ಚಂದ್ರಶೇಖರ ಶೇರಿಕಾರ ಅವರು ಸೇರಿಕೊಂಡು ಶಹಾಬಾದ ನಗರದಲ್ಲಿ ೧೯೭೦ರಲ್ಲಿ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಸಂಸ್ಥೆ ಹಾಗೂ ಕನ್ಯಾಪ್ರೌಢಶಾಲೆಯನ್ನು ಹುಟ್ಟುಹಾಕಿದರು. ಆ ಸಮಯದಲ್ಲಿ ಕೇವಲ ಬೆರಳಣಿಕೆಯಷ್ಟೇ ಶಾಲೆಗಳಿದ್ದವು.ಆದರೆ ಹೆಣ್ಣು ಮಕ್ಕಳಿಗಾಗಿಯೇ ಶಾಲೆ ತೆರೆಯಬೇಕೆಂಬ ಮಹದಾಸೆಯಿಂದ ತಾಲೂಕಿನಲ್ಲಿಯೇ ಪ್ರಥಮ ಕನ್ಯಾ ಪ್ರೌಢಶಾಲೆ ಪ್ರಾರಂಭವಾಯಿತು. ಆಂಗ್ಲ ಮಾಧ್ಯಮ ಶಾಲೆಗೆ ಪೈಪೋಟಿ ನೀಡುವ ಸಂಸ್ಥೆಯಾಗಿ ಬೆಳೆದು ಸಂಸ್ಥೆ ಪ್ರಾರಂಭದಲ್ಲಿ ಕೇವಲ ೧೭ ಹೆಣ್ಣು ಮಕ್ಕಳಿಂದ ಪ್ರಾರಂಭವಾದ ಶಾಲೆ ಇಂದು ೩೫ ಕ್ಕೂ ಹೆಚ್ಚು ಕೋಣೆಗಳು, ಸುಮಾರು ೧೭೦೦ ವಿದ್ಯಾರ್ಥಿನಿಯರು, ೭೦ಕ್ಕೂ ಹೆಚ್ಚು ಶಿಕ್ಷಕ ಹಾಗೂ ಸಿಬ್ಬಂದಿ ವರ್ಗವಿದೆ.

Contact Your\'s Advertisement; 9902492681

ಇಲ್ಲಿ ಶಿಕ್ಷಣ ಮುಗಿದ ಮೇಲೆ ಇಲ್ಲಿನ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಿ ಹೋಗುವುದು, ಗುಣಾತ್ಮಕ ಶಿಕ್ಷಣ ಕೊಡುವ ಸಂಸ್ಥೆಗಳು ಅಪರೂಪವಾಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಆಗ ಪಾಲಕರ ಒತ್ತಾಸೆಯಿಂದ ಸಂಸ್ಥೆಯ ಅಡಿಯಲ್ಲಿ  ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳು ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಈ ಸಂಸ್ಥೆಯ ನೆರಳಿನಲ್ಲಿ ಪ್ರಾರಂಭವಾದವು.

ಅಂದಿನಿಂದ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ಶಹಾಬಾದ ಹಾಗೂ ಸುತ್ತಮುತ್ತಲಿನ ಜನರ ಶಿಕ್ಷಣ ದಾಹ ತಣಿಸುತ್ತಿದೆ.ಶಾಲೆ ಪ್ರಾರಂಭಗೊಂಡ ಸಮಯದಲ್ಲಿ ಮಕ್ಕಳ ಕೊರತೆ ಕಾಡಿತೇನೋ ಆದರೆ ವರ್ಷದಿಂದ ವರ್ಷ ಹೆಚ್ಚಿದ ಶಿಕ್ಷಣ ಗುಣಮಟ್ಟ, ಆಡಳಿತ ಮಂಡಳಿಯ ಆಸಕ್ತಿ, ಶಿಕ್ಷಕರ ಸಮರ್ಪಣಾ ಭಾವದಿಂದ ಕಲಿಸುವಿಕೆ ಹಾಗೂ ಮೂಲಭೂತ ಸೌಲಭ್ಯಗಳಿಂದಾಗಿ ಪಾಲಕ ವರ್ಗವದರು ಸಂಸ್ಥೆಯ ಪ್ರಭಾವದತ್ತ ಸೆಳೆಯಲ್ಪಡುತ್ತಿದ್ದು, ಈಗ ವಿವಿಧ ತರಗತಿಗಳಿಗೆ ಸೇರ್ಪಡೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಮುಟ್ಟತ್ತಿ ಹೇಳುತ್ತಾರೆ.

ಇಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿದ್ದು, ಕೇವಲ ಪಠ್ಯ ಪುಸ್ತಕ ಓದಿಸಿ ಅಂಕಗಳಿಸುವಿಕೆಯಿಂದಲ್ಲ.ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಅಷ್ಟೇ ಮಹತ್ವ ನೀಡಲಾಗಿದೆ. ರಸಪ್ರಶ್ನೆ, ಸಂವಾದ ಕಾರ್ಯಕ್ರಮ, ವಿಜ್ಞಾನ ಪ್ರದರ್ಶನ, ವನಮಹೋತ್ಸವ, ನಿಬಂಧ ಸ್ಪರ್ಧೆಗಳು, ಸಂಸ್ಕಾರ ಶಿಬಿರ, ಯೋಗ ಶಿಬಿರ, ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಪಾಲಕರ ಜತೆಗೆ ನಿಕಟ ಸಂಪರ್ಕ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪ್ರಮುಖ ಸಂಗತಿಗಾಗಿದ್ದು ಈ ಭಾಗದಲ್ಲಿ ಜನಪ್ರೀಯ ಸಂಸ್ಥೆಯಾಗಿ ಬೆಳೆಯುವುದಕ್ಕೆ ಸಹಕಾರಿಯಾಗಿದೆ.

ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆ,ಸಾಹಿತ್ಯ, ಭಾಷಣ, ವಿಜ್ಞಾನ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆ ,ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತಂದಿದ್ದಾರೆ. ಅಲ್ಲದೇ ಓದಿನಲ್ಲೂ ಮುಂದಿರುವುದು ಕೂಡ ಶಾಲೆಯ ಇದುವರೆಗಿನ ವಾರ್ಷಕ ಫಲಿತಾಂಶದ ಪಟ್ಟಿಯೇ ಹೇಳುತ್ತದೆ. ರಾಷ್ಟ್ರ ಮಟ್ಟದ ಬಾಲ್ ಬ್ಯಾಟ್ ಮಿಂಟನ್‌ನಲ್ಲಿ ಇಲ್ಲಿನ ವಿದ್ಯಾರ್ಥಿನಿ ದ್ವೀತಿಯ ಸ್ಥಾನ ಪಡೆದಿದ್ದಾರೆ.ಅಲ್ಲದೇ ರೀಯಾ ಚಟರ್ಜಿ ಪದವಿ ಪೂರ್ವ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಕಾರಣವಾಗಿದೆ. ಎಲ್ಲಾ ತರಗತಿಗಳಿಗೆ ಸ್ವಂತದಾದ ಕೋಣೆಗಳಿವೆ.ಸುಸಜ್ಜಿತವಾದ ಪ್ರಯೋಗಾಲಯ, ಪಿಠೋಪಕರಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಗ್ರಂಥಾಲಯ, ಸಿಬ್ಬಂದಿ ಕೋಣೆ, ಅತ್ಯಾಧುನಿಕ ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿದೆ.

ಈಗ ನೀಡುತ್ತಿರುವ ಶಿಕ್ಷಣ ತಮಗೆ ತೃಪ್ತಿ ನೀಡುತ್ತಿಲ್ಲವೆಂದು ಹೇಳುವ ಆಡಳಿತ ಮಂಡಳಿಯವರು ಅದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.ಅದಕ್ಕಾಗಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಬೇಟಿ ನೀಡಿ, ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಲು ಅನೇಕ ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ.

ಇಲ್ಲಿನ ಸದಸ್ಯ ವರ್ಗದವರು ಹಲವು ದಶಕಗಳ ಕಾಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಮುನ್ನೆಡೆಸುತ್ತಾ ಸಂಗೀತ ಶಾಲೆ, ಹೊಲಿಗೆ ತರಬೇತಿ ಕೇಂದ್ರ ನಡೆಸುದಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ತೆರೆದು ಹಣ ಕೊಳ್ಳೆ ಹೊಡೆಯುತ್ತಿರುವ ಅನೇಕ ನಾಯಿಕೊಡೆಗಳಂತಹ ಶಿಕ್ಷಣ ಸಂಸ್ಥೆಗಳ ಮಧ್ಯೆ ತಾಲೂಕಿನಲ್ಲಿಯೇ ಹೆಣ್ಣು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವ ಅಪರೂಪದ ಏಕೈಕ ಸಂಸ್ಥೆ ಇದಾಗಿದೆ.

ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿರಾಗಬಾರದು ಎಂಬ ಉದ್ಧೇಶದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ.ಇಲ್ಲಿ ವಿಶೇಷವಾಗಿ ಗುಣಾತ್ಮಕ ಶಿಕ್ಷಣದ ಜತೆಗೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.ಶಹಾಬಾದ ಹಾಗೂ ಚಿತ್ತಾಪೂರ ತಾಲೂಕಿನಲ್ಲಿಯೇ ಏಕೈಕ ಹೆಣ್ಣು ಮಕ್ಕಳ ಸಂಸ್ಥೆ ಇದಾಗಿದೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ- ಭೀಮಾಶಂಕರ ಮುಟ್ಟತ್ತಿ ಕಾರ್ಯದರ್ಶಿಗಳು ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಶಹಾಬಾದ.

ಹೆಣ್ಣು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಾಲೆಯನ್ನು ತೆರೆದು ಗುಣಾತ್ಮಕ ಶಿಕ್ಷಣ ನೀಡುವುದರೊಂದಿಗೆ ನಾಡಿನ ಹೆಸರಾಂತ ವ್ಯಕ್ತಿಗಳನ್ನು ಕರೆಯಿಸಿ ಮಕ್ಕಳ ಜತೆ ಸಂವಾದ ನಡೆಸಲಾಗುತ್ತದೆ.ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸುವಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಕಾರ್ಯಗತವಾಗಿದೆ- ಅನೀಲಕುಮಾರ ಮರಗೋಳ ಆಡಳಿತ ಮಂಡಳಿಯ ಸದಸ್ಯ .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here