ಕಲಬುರಗಿ: ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯರೆಂಬ ತಾಯಿ ಬೇರು ಮರೆತು ಲಿಂಗಾಯತರು ದಿವಾಳಿಯಾಗಿದ್ದಾರೆ ಎಂದು ಗಂಗಾವತಿಯ ಬಸವ ತತ್ವ ಪ್ರತಿಪಾದಕ ಸಿ.ಎಚ್. ನಾರಿನಾಳ ಹೇಳಿದರು.
ನಗರದ ಬಸವ ವೃತ್ತದ ಬಸವ ಉದ್ಯಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳು ಆಯೋಜಿಸಿದ್ದ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮೌಢ್ಯದ ಜಾಡು ಬಿಡಿಸಿದ ವಚನಕಾರರು ವಿಷಯ ಕುರಿತು ಮಾತನಾಡಿದರು.
ಇಂದಲ್ಲ ನಾಳೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆದೆ ಪಡೆಯುತ್ತೇವೆ ಎಂದರು. ವೇದಕ್ಕೆ ಒರೆಯನಿಕ್ಕಿ, ಆಗಮದ ಮೂಗ ಕೊಯ್ದು ಬಂದ ಬಸವ ಸ್ಥಾಪಿತ ಲಿಂಗಾಯತ ಧರ್ಮ ಜಾಗತಿಕ ಧರ್ಮವಾಗುವ ಅರ್ಹತೆ ಹೊಂದಿದೆ. ಲಿಂಗಾಯತರು ಕೂಡ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮನುಷ್ಯ ಸಮಾನತೆಗೆ ಹೋರಾಡಿದ ಧರ್ಮ ಬಸವ ಧರ್ಮ. ಜಾತಿ ಮಾಡುವವರು ಬಸವಾನುಯಾಯಿಗಳಲ್ಲ. ಸಂವಿಧಾನ ಬದಲಾಯಿಸಲು ನಿಮ್ಮಪ್ಪನ ಜಾಹಗಿರಿಯೇ? ಎಂದು ಪ್ರಶ್ನಿಸಿದ ಅವರು, ಬುದ್ದ ಹೇಳಿದ್ದನ್ನು ಬಸವಣ್ಣ ಕ್ರಿಯಾರೂಪದಲ್ಲಿ ತಂದರು ಎಂದು ಹೇಳಿದರು.
ದಲಿತ, ದಮನಿತರಿಗೆ ದನಿಯಾಗಿದ್ದ ಬಸವಣ್ಣನವರು. ಹೀಗಾಗಿ ಇಡೀ ದಲಿತರು ಬಸವಣ್ಣನಿಗೆ ಋಣಿಯಾಗಿರಬೇಕು ಎಂದು ತಿಳಿಸಿದರು. ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವವರನ್ನು ಭಾರತದ ಪ್ರತಿಯೊಬ್ಬ ಪ್ರಜೆ ವಿರೋಧಿಸಬೇಕು ಎಂದು ಹೇಳಿದರು. ಮೆಹರಾಜ ಪಟೇಲ್, ಬಸವ ಕಲ್ಯಾಣ ಶಾಸಕ ನಾರಾಯಣರಾವ ಆಗಮಿಸಿದ್ದರು.