ಕಲಬುರಗಿ: ಚಿಂಚೋಳಿ ತಾಲೂಕಿನ ಯಲಮಾಮಡಿ ಸಮೀಪ ಟೈರ್ ಸ್ಫೋಟಗೊಂಡು ಕ್ರೂಸರ್ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಹತ್ತು ಮಂದಿಗೆ ಗಂಭೀರ ಗಾಯ ಆಗಿರುವ ಘಟನೆ ನಡೆದಿದೆ.
ಯಲಮಾಮಡಿ ಪುನರ್ವಸತಿ ಕೇಂದ್ರದ ನಿವಾಸಿ ಶಾಮರಾವ್ (64) ಹಾಗೂ ತಾಂಡಾ ನಿವಾಸಿ ಮೋತಿಬಾಯಿ (55) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಕಾಳಗಿ ಕಡೆಯಿಂದ ಚಿಂಚೋಳಿ ಪಟ್ಟಣಕ್ಕೆ ಹೊಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಕ್ರೂಸರ್ ವಾಹನದಲ್ಲಿ ಡ್ರೈವರ್ ಸೇರಿ 16 ಜನ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.
ಗಾಯಾಳುಗಳಿಗೆ ಕಲಬುರಗಿ ಮತ್ತು ಬೀದರ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.