ಶರಣರ ನಾಡಿನಲ್ಲಿ ಬೌದ್ಧ ಸಾಹಿತ್ಯ ಸಮ್ಮೇಳನ

0
187

ಮೊನ್ನೆ ತಾನೇ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾದ ಗುಲಬರ್ಗಾ ವಿಶ್ವವಿದ್ಯಾಲಯದ ಕಪ್ಪುಮಣ್ಣಿನ ಅಂಗಳದಲ್ಲಿ ರಾಷ್ಟ್ರಮಟ್ಟದ ಮೊಟ್ಟಮೊದಲ ಬೌದ್ಧ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಗುಲಬರ್ಗಾ ಇದೇ ವಿಶ್ವವಿದ್ಯಾಲಯದ ದಶಮಾನೋತ್ಸವದ ಹೊಸ್ತಿಲಲ್ಲಿರುವ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಹಾಗೂ ಸುವರ್ಣ ಸಂಭ್ರಮದ ಸಡಗರದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಇದೇ ಮಾರ್ಚ್ ೧೧ ಮತ್ತು ೧೨ ರಂದು ಎರಡು ದಿನಗಳ ರಾಷ್ಟ್ರಮಟ್ಟದ ಬೌದ್ಧ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ.

Contact Your\'s Advertisement; 9902492681

ಪ್ರಾಚೀನ ಕಾಲದ ಬೌದ್ಧರ ಕಲಿಕಾ ಕೇಂದ್ರವಾದ ಸನ್ನತಿಯ ಸನಿಹದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯು ೨೦೦೮ರಲ್ಲಿ ಸ್ಥಾಪಿತವಾಗಿದ್ದು, ಇದರ ನಿರ್ದೇಶಕರಾಗಿದ್ದವರು ಡಾ.ಎಚ್.ಟಿ.ಪೋತೆಯವರು. ಕ್ರಿಯಾಶೀಲ ಹಾಗೂ ’ಕಾಯಕವೇ ಕೈಲಾಸ’ದ ಕಲ್ಯಾಣ ಕರ್ನಾಟಕದ ಶರಣರ ಈ ನಾಡಿನಲ್ಲಿ ಶ್ರಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ವೈಚಾರಿಕ ಪ್ರಣತಿಯಾಗಿ ಬೆಳಗುತ್ತಿರುವ ಡಾ.ಪೋತೆಯವರು ಈ ಸಮ್ಮೇಳನದ ಜವಾಬ್ದಾರಿಯನ್ನು ಹೊತ್ತಿರುವುದು ಆನೆ ಬಲವನ್ನು ತಂದಿದೆ. ಈ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ಅಡಿಯಲ್ಲಿ ಪಿ.ಜಿ.ಡಿಪ್ಲೊಮಾ ಕೋರ್ಸ್‌ನ್ನು ಆರಂಭಿಸಿದ್ದು ಹಲವಾರು ಕಲಿಕಾರ್ಥಿಗಳು ಪದವಿಗಳನ್ನು ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ಭಗವಾನ್ ಬುದ್ಧನ ನ್ಯಾಯ, ಅಹಿಂಸೆ, ಮಾನವೀಯತೆ, ಆದರ್ಶ ಬದುಕು, ತ್ಯಾಗ ಜೀವನ, ಜ್ಞಾನ, ಶೀಲ, ಶಾಂತಿಯೊಂದಿಗೆ ಭವ್ಯ ಭರತ ಖಂಡದ ಪ್ರಾಚೀನ ಚರಿತ್ರೆಯನ್ನು, ನೆಲ ಸಂಸ್ಕೃತಿಯನ್ನು ಹಾಗೂ ಬುದ್ಧನ ಸಂದೇಶಗಳನ್ನು ಸಾರುತ್ತ ಹನ್ನೆರಡು ವರ್ಷಗಳನ್ನು ಕಳೆದಿದೆ. ಈ ಕಳೆದ ಹನ್ನೆರಡು ವರ್ಷಗಳಲ್ಲಿ ಪ್ರಾಚೀನ ಪಾಲಿ ಭಾಷೆಯಲ್ಲಿ ಅಡಕವಾಗಿರುವ ಬುದ್ಧ ಮತ್ತು ಆತನ ಬೌದ್ಧ ಧರ್ಮದ ತಳಹದಿಯ ಮೇಲೆ ಪಾಲಿ ಸಾಹಿತ್ಯದ ಚರಿತ್ರೆ, ವ್ಯಾಕರಣ, ಬೌದ್ಧ ಧರ್ಮದ ಹೀನಯಾನ ಮಹಾಯಾನ ಮುಂತಾದ ವಿಷಯಗಳನ್ನು ಈ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಯನಕ್ಕಿಡಲಾಗಿದೆ.

ಇದರೊಂದಿಗೆ ಹಲವಾರು ಉಪನ್ಯಾಸ, ಕಾರ್ಯಾಗಾರಗಳನ್ನು ಏರ್ಪಡಿಸಿ ಬುದ್ಧ ಹಾಗೂ ಆತನ ಧರ್ಮದ ಕುರಿತು ಹಲವು ವಿದ್ವಾಂಸರಿಂದ ಜ್ಞಾನವನ್ನು ಪಸರಿಸಲಾಗಿದೆ. ಸಂಶೋಧನೆ, ಮಾನವಿಕಶಾಸ್ತ್ರ, ವಿಮರ್ಶೆ, ಕಥೆ, ಕಾವ್ಯ, ನಾಟಕ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಬೌದ್ಧ ಸಾಹಿತ್ಯ ಅಧ್ಯಯನ ವಿಶೇಷ ಮಾಲಿಕೆಯ ಆರು ಬೃಹತ್ ಕೃತಿಗಳನ್ನು ವಿದ್ವತ್‌ಮಣಿಗಳಿಂದ ಸಂಪಾದಿಸಲಾಗಿದ್ದು ಇವೆಲ್ಲವುಗಳು ಈ ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಳ್ಳುತ್ತಿರುವುದು ಬಹು ವಿಶೇಷ.

ಸಾಮ್ರಾಟ ಅಶೋಕ ವೇದಿಕೆಯ ಮುಖೇನ ನಾಡಿನ ಖ್ಯಾತ ಸಂಶೋಧಕರಾದ ಪ್ರೊ.ತಾಳ್ತಜೆ ವಸಂತಕುಮಾರ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೌದ್ಧ ಸಾಹಿತ್ಯದ ಅನುವಾದಗಳು, ಕನ್ನಡ ಬೌದ್ಧ ಸಾಹಿತ್ಯ ಮತ್ತು ಸಂಶೋಧಕರು, ಬೌದ್ಧ ಸಾಹಿತ್ಯ ಮತ್ತು ಸಂತ ಪರಂಪರೆ, ಸೃಜನಶೀಲ ಬೌದ್ಧ ಸಾಹಿತ್ಯ, ಬಹುಭಾಷಾ ಗೋಷ್ಠಿ, ಕರ್ನಾಟಕದ ಬೌದ್ಧ ಕೇಂದ್ರಗಳು, ಬೌದ್ಧ ಕವಿಗೋಷ್ಠಿಗಳು ನಡೆಯುತ್ತವೆ. ಈ ಸಮ್ಮೇಳನಕ್ಕೆ ನಾಡಿನ, ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಿದ್ವಾಂಸರು ಉಪನ್ಯಾಸ ನೀಡಲಿದ್ದು, ಇದರೊಂದಿಗೆ ಕವಿ ರವೀಂದ್ರನಾಥ ಟ್ಯಾಗೋರ ಅವರು ಬರೆದ ’ಚಾಂಡಾಲಿಕ’ ಪ್ರದರ್ಶನವನ್ನು ಕಲಬುರ್ಗಿಯ ರಂಗಾಯಣದವರು ಪ್ರಸ್ತುತಪಡಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಅಧ್ಯಯನಾಸಕ್ತರಿಂದ ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತ ಹಲವು ಬಗೆಯ ಚರ್ಚೆಗಳು ಇಲ್ಲಿ ನಡೆಯುತ್ತವೆ.

ಈ ದೇಶ ಕಂಡ ಬಹುದೊಡ್ಡ ವಿದ್ವಾಂಸರಾದ ಡಾ.ಎನ್.ಎಸ್.ತಾರಾನಾಥ ಅವರು ಸಮಾರೋಪ ನುಡಿಗಳನ್ನಾಡಿ ಸಮ್ಮೇಳದ ಮೆರಗನ್ನು ಹೆಚ್ಚಿಸುವರು. ಕಲಬುರ್ಗಿಯ ಬಿಸಿಲು ನಾಡಿನಲ್ಲಿ ಜರುಗುತ್ತಿರುವ ಬುದ್ಧನ ಸಾಹಿತ್ಯ ಸಮ್ಮೇಳನವನ್ನು ಮುನ್ನಡೆಸುತ್ತಿರುವವರು ಅಧ್ಯಯನಶೀಲ ಪ್ರಾಧ್ಯಾಪಕ, ಸಂಶೋಧಕ, ಅನುವಾದಕ, ಕವಿ, ಕಥೆಗಾರ, ವಿಮರ್ಶಕ, ವೈಚಾರಿಕ ಚಿಂತಕ, ಕ್ರಿಯಾಶೀಲ ಸಂಘಟಕ ಇತ್ಯಾದಿ ಬಹುರೂಪಿ ವಲಯಗಳಲ್ಲಿ ದಲಿತ-ಬಂಡಾಯ, ಬೌದ್ಧ ಬಾಹುಳ್ಯವನ್ನು ಚಾಚಿರುವ ಡಾ.ಎಚ್.ಟಿ.ಪೋತೆಯವರು. ಇವರ ನೇತೃತ್ವದಲ್ಲಿ ಜರುಗಿದ ಸಮ್ಮೇಳನ, ಕಾರ್ಯಾಗಾರ, ಉಪನ್ಯಾಸ, ಕವಿಗೋಷ್ಠಿಗಳಿಗೆ ಲೆಕ್ಕವೇ ಇಲ್ಲ. ಇಂಥವರು ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಖಾಯದ ಡೀನರಾಗಿ, ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿಯೂ ಬೋಧನೆ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಹಿಗ್ಗಿನಿಂದ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.

 

ಡಾ.ಶಿವರಾಜ ಯತಗಲ್
ಕನ್ನಡ ಅಧ್ಯಯನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ’ಜ್ಞಾನತುಂಗ’
ಯರಗೇರಾ-ರಾಯಚೂರು-584133
ಮೊ: 9019867886/8660827705

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here