ವಾಡಿ: ಬೀದಿಗೆ ಬಂದ್ರೆ ನೀನು ನಿನ್ನ ಮನೆಗೆ ಬರುವೆ ನಾನು! ಹೀಗೆ ಮಹಾಮಾರಿ ಕೊರೊನಾ ವೈರಸ್ ಕುರಿತ ಎಚ್ಚರಿಕೆಯ ಬರಹವೊಂದು ಸಿಮೆಂಟ್ ನಗರಿ ವಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೋಚರಿಸುತ್ತಿದೆ.
ಜಗತ್ತಿನೆಲ್ಲೆಡೆ ಮರಣ ಮೃದಂಗ ಭಾರಿಸುವ ಮೂಲಕ ಪ್ರಾಣಭಯ ಹುಟ್ಟಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಪಟ್ಟಣದ ಪುರಸಭೆ ಆಡಳಿತ ಹಾಗೂ ಪೊಲೀಸ್ ಇಲಾಖೆ, ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಕಳೆದ ಒಂದು ತಿಂಗಳಿಂದ ಜನರ ಸುರಕ್ಷತೆಗಾಗಿ ಶ್ರಮಿಸುತ್ತಿವೆ. ರವಿವಾರ ಚಿತ್ರಕಲಾವಿದರ ಮೂಲಕ ಮುಖ್ಯ ರಸ್ತೆಗಳಲ್ಲಿ ಆಕರ್ಷಕ ನುಡಿ ಬರಹಗಳನ್ನು ಬರೆಸುವ ಕಾರ್ಯಕ್ಕೆ ಚಾಲನೆ ನೀಡಿರುವ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ ಅವರು ಕೊರೊನಾ ರೋಗವೇ ಹೇಳುವ ಮೇಲಿನ ವಾಕ್ಯಗಳನ್ನು ಮೂಡಿಸಿ ಜನರು ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ರವಾನಿಸುವ ಪ್ರಯತ್ನ ಮಾಡಿದ್ದು, ಆಸ್ಪತ್ರೆ, ಮೇಡಿಕಲ್, ಬ್ಯಾಂಕ್ ಅಥವ ತರಕಾರಿ ಖರೀದಿ ನೆಪದಲ್ಲಿ ವಿನಾಕಾರಣ ಬೀದಿಗೆ ಬರುತ್ತಿರುವವರ ಗಮನ ಸೆಳೆಯುತ್ತಿದೆ.
ಕೊರೊನಾ ಜೀವಕಂಟಕ ವೈರಸ್ಸಾಗಿದ್ದು, ಒಮ್ಮೆ ಮನೆಬಿಟ್ಟು ಹೊರ ಬಂದರೆ ನಿಮ್ಮ ಮೂಲಕ ಅದು ಮನೆಗೆ ಬರುತ್ತದೆ. ಮನೆಯವರೆಲ್ಲರಿಗೂ ವೈರಸ್ ಅಂಟುವ ಸಾಧ್ಯತೆಯಿದೆ. ನಮ್ಮಿಂದ ನಮ್ಮವರ ಆರೋಗ್ಯಕ್ಕೆ ಕಂಟಕ ಬರಬಾರದು. ಲಾಕ್‌ಡೌನ್ ಅಂತ್ಯದ ವರೆಗೂ ಮನೆಯಲ್ಲಿಯೇ ಕಾಲ ಕಳೆಯಬೇಕು. ಹೊರಗಡೆ ಬರುವ ಅನಿವಾರ್ಯತೆ ಸೃಷ್ಠಿಯಾದರೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಎಚ್ಚರಿಸಿದ್ದಾರೆ.