Monday, July 15, 2024
ಮನೆಬಿಸಿ ಬಿಸಿ ಸುದ್ದಿರೈತರಿಗಾಗಿ ಏನು ಮಾಡದ ಯಡಿಯೂರಪ್ಪ ಹೋರಾಟ ಯಾವ ಪುರುಷಾರ್ಥಕ್ಕೆ? ಸಿಎಂ

ರೈತರಿಗಾಗಿ ಏನು ಮಾಡದ ಯಡಿಯೂರಪ್ಪ ಹೋರಾಟ ಯಾವ ಪುರುಷಾರ್ಥಕ್ಕೆ? ಸಿಎಂ

ಕಲಬುರಗಿ: ಬಿಜೆಪಿ ನಾಯಕರ ಟೀಕೆಗಳಿಗೆ  ಈ ವೇದಿಕೆಯಿಂದ ಉತ್ತರ ಕೊಡುವುದಿಲ್ಲ. ಅವರಿಗೆ ಉತ್ತರ ಕೊಡುತ್ತಿದ್ದರೆ ಜನರ ಸಮಸ್ಯೆ ಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಅವರು ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸಿಎಂ ಅವರ ರಾಜಕೀಯ ಅನುಭವ ಜನಪರ ಹೋರಾಟ ಹಾಗೂ ಹಿನ್ನೆಲೆ ನೋಡಿದರೆ ಅವರು ಯಾವೊತ್ತೋ ಸಿಎಂ ಆಗಬೇಕಿತ್ತು. ಆದರೆ ಕೆಲ ರಾಜಕೀಯ ನಿರ್ಧಾರಗಳಿಂದ ಅವರು ಸಿಎಂ ಆಗಲಿಲ್ಲ ಎನ್ನುವ ನೋವು ನಮಗೂ ಇದೆ ಎಂದರು.

ಕೋಲಿ ಸಮಾಜದ ನಾಯಕರು ಎಂದು ಹೇಳಿಕೊಳ್ಳುತ್ತಿರುವವರು ಹಾಗೂ ಖರ್ಗೆ ಅವರ ವಿರುದ್ದ ತೊಡೆತಟ್ಟಿ ಮೀಸೆ ತಿರುವುತ್ತಿರುವವರು ಕೋಲಿ ಸಮಾಜಕ್ಕೆ ಖರ್ಗೆ ಅವರ ಕೊಡುಗೆಯನ್ನು  ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು. ಕೋಲಿ ಸಮಾಜವನ್ನು ಎಸ್ ಟಿ ಸೇರಿಸುವುದು ಖರ್ಗೆಯವರಿಂದ ಮಾತ್ರ ಸಾಧ್ಯ‌ ಹೊರತು‌ ಮೋದಿಯಿಂದಲ್ಲ ಎಂದು ಸಿಎಂ ಒತ್ತಿಹೇಳಿದರು. ಹೈಕ ಭಾಗದ ಜನರಿಗೆ ಅನುಕೂಲವಾಗಲು ಆರ್ಟಿಕಲ್ 371 (J) ಜಾರಿಗೆ ತಂದ ಖರ್ಗೆ ಅವರ ಪರಿಶ್ರಮವನ್ನು ಈ ಭಾಗದ ನೀವು ಮರೆಯಬಾರದು. ಇಂತಹ ನಾಯಕನ ಬಗ್ಗೆ ಹಗುರ ಮಾತುಗಳಿಂದ ಮನಸು ನೋಯಿಸಬೇಡಿ ಎಂದು ಕೈಮುಗಿದು ಕಳಕಳಿಯಿಂದ ವಿನಂತಿಸುತ್ತೇನೆ ಎಂದರು.

ಪ್ರಿಯಾಂಕ್ ಖರ್ಗೆ ಯನ್ನು ಈ ಭಾಗದ ಕ್ರಿಯಾಶೀಲ ಹಾಗೂ ಬುದ್ದಿವಂತ ನಾಯಕ ಅವರನ್ನು ಈ ಭಾಗದ ನೀವು ನಾಯಕರನ್ನಾಗಿ‌ ರೂಪಿಸಿ ಅವರನ್ನು ಬೆಳೆಸಿದ್ದೀರಿ ಆದರೆ ಅವರನ್ನು ಟೀಕಿಸುವವರ ಮಲ್ಲಕಾರ್ಜುನ ಖರ್ಗೆ ತಮ್ಮನ್ನು ತುಳಿದು ಪ್ರಿಯಾಂಕ್ ಅವರನ್ನು ಬೆಳೆಸಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಬಿಜೆಪಿ ನಾಯಕರ ಸುಳ್ಳಿನ ಮಾತುಗಳನ್ನು‌ ನಂಬಬೇಡಿ. ‌ನಾನು ಬಡವರ ಮಗ ತಾಯಂದಿರ ಆಶೀರ್ವಾದದಿಂದ ಇಲ್ಲಿದ್ದೇನೆ. ನನ್ನನ್ನು ಸಿಎಂ ಮಾಡಿದ್ದಾಗಿ‌ ಖರ್ಗೆ ಅವರು ಹೇಳುತ್ತಾರೆ. ಅವರ‌ ನಂಬಿಕೆಗೆ ಧಕ್ಕೆಯಾಗದಂತೆ ಈ ಭಾಗದ ಅಭಿವೃದ್ದಿ ಕೆಲಸ ಮಾಡುತ್ತೇನೆ.

ಬಹುದಿನದ ಬೇಡಿಕೆಯಾದ ಐನಾಪುರ ಏತ ನೀರಾವರಿ ಯೋಜನೆ ಹಾಗೂ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು. ರೈತರ ಸಾಲ ಮನ್ನಾ ಮಾಡದಿದ್ದರೆ ಹೋರಾಟ ಮಾಡುವುದಾಗಿ ಯಡಿಯೂರಪ್ಪ ಹೇಳಿರುವುದನ್ನು ನಾನು ಮಾಧ್ಯಮದಲ್ಲಿ ಓದಿದ್ದೇನೆ. ರೈತರಿಗಾಗಿ‌ ಏನೂ ಮಾಡದ ನೀವು ಯಾವ ಪುರುಷಾರ್ಥಕ್ಕೆ ಹೋರಾಟ ನಡೆಸುತ್ತೀರಿ ಯಡಿಯೂರಪ್ಪ ನವರೇ ? ಎಂದು ಪ್ರಶ್ನಿಸಿದರು.

ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ 6 ತಿಂಗಳಿನಿಂದ 12 ತಿಂಗಳವರೆಗಿನ‌ ಪ್ರತಿತಿಂಗಳ 2000  ಸಹಾಯಧನ ನೀಡಲು‌ ಈಗಾಗಲೇ ನಿರ್ಧರಿಸಿದ್ದೇನೆ. ಅದನ್ನು ಮುಂದಿನ ವರ್ಷದಲ್ಲಿ 2000 ದಿಂದ 5000 ಕ್ಕೇರಿಸಲಿದ್ದೇನೆ ಎಂದರು. ಕೇಂದ್ರದ ತಾರತಮ್ಯವನ್ನು ಪ್ರಸ್ರಾಪಿಸಿದ ಖರ್ಗೆ ಅವರ ಮಾತನ್ನು ಪುನರುಚ್ಚರಿಸಿದ ಸಿಎಂ ನರೇಗಾ ಅಡಿಯಲ್ಲಿ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡಲಿಲ್ಲ.ಆದರೆ ರಾಜ್ಯ ಸರಕಾರ ಅವರಿಗಾಗಿ 1300 ಕೋಟಿ  ಬಿಡುಗಡೆ ಮಾಡಿದೆ.

ಕಲಬುರಗಿ ಜಿಲ್ಲೆಯಲ್ಲಿ ತೀವ್ರ ನೀರಿನ‌ ಸಮಸ್ಯೆ ‌ಇದ್ದು ಶಾಶ್ವತ ಪರಿಹಾರ ಕಂಡುಹಿಡಿದು ನೀರಿನ ದಾಹ ತೀರಿಸಲು ಪ್ರಯತ್ನಿಸುವುದಾಗಿ ಹೇಳಿದರು. ಖರ್ಗೆ ಅವರ ಈ ಭಾಗದ ಮರವಿದ್ದಂತೆ ಅವರ ನೆರಳಲ್ಲಿ ಹಲವಾರು ನಾಯಕರು ಬೆಳೆದಿದ್ದಾರೆ. ಅವರಂತ ಹೆಮ್ಮೆಯ ನಾಯಕನನ್ನು ನೀವು ಕಳೆದುಕೊಳ್ಳಬೇಡಿ. ಮೋದಿ ಅವರ ವೈಫಲ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಅವರನ್ನು ಎದುರಿಸಿದ ಏಕೈಕ‌ ನಾಯಕರವರು ಎಂದರು. ಚಿಂಚೋಳಿಯನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಮಾಡುವುದಾಗಿ ಹೇಳಿದ ಸಿಎಂ ಮೈತ್ರಿ ಅಭ್ಯರ್ಥಿ ಸುಭಾಷ್ ರಾಠೋಡ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ನಾಯಕರ ಹೇಳಿಕೆಯನ್ನು ಆಧರಿಸಿ ಮಾಧ್ಯಮದ ವರದಿಯನ್ನು ನೀವು ನಂಬಬೇಡಿ.‌ ಈ ಸರಕಾರ‌ ಮೇ 23 ರ ನಂತರ ಇನ್ನಷ್ಟು ಸುಭದ್ರವಾಗಲಿದ್ದು ತನ್ನ  ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಒತ್ತಿ ಹೇಳಿದರು.

ವೇದಿಕೆಯ ಮೇಲೆ ಸಂಸದರಾದ ಎಂ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವರಾದ ಎಂ.ಬಿ.ಪಾಟೀಲ್, ಸಚಿವರಾದ ಬಂಡೆಪ್ಪ ಕಾಶೆಂಪುರ, ಪ್ರಿಯಾಂಕ್ ಖರ್ಗೆ, ಎಂ.ಸಿ.ಮನಗೂಳಿ, ‌ರಹೀಂಖಾನ್, ಈಶ್ವರ ಖಂಡ್ರೆ, ಅಮರೇಗೌಡ ಭಯ್ಯಾಪುರ, ನಾರಾಯಣರಾವ್, ಅಜಯ್ ಸಿಂಗ್,  ಶೈಲೆಂದ್ರನಾಥ್ ಸಾಕೆ,‌ ಶರಣಪ್ರಕಾಶ್ ಪಾಟೀಲ್, ಕೈಲಾಶನಾಥ್ ಪಾಟೀಲ್, ಜಗದೇವ ಗುತ್ತೇದಾರ್‌ ಮತ್ತಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular