ಯಡ್ರಾಮಿ ಎಂಬ ಮೊಗಲಾಯಿ ನೆಲ

0
240

ನಮ್ಮವ್ವ ಹೇಳುತ್ತಿದ್ದ ನಮ್ಮ ಮೊಗಲಾಯಿ ನೆಲದ ದೃಷ್ಟಾಂತಗಳು ಹೂಬಾ ಹೂಬಾ ಕಣ್ಮುಂದೆ ನಡೆದಂತೆ ನೆನಪಿವೆ. ಕಳೆದೊಂದು ವರುಷದಿಂದ ತಾಲೂಕು ಪಾತ್ರವನ್ನು ಬದುಕುತ್ತಿರುವ ಯಡ್ರಾಮಿಗೆ ಮೊಗಲಾಯಿತನದಿಂದ ವಿಮುಕ್ತಿ ದೊರಕಿಲ್ಲ. ಅವ್ವ ಅನಕ್ಷರಸ್ಥೆ. ಅಕ್ಷರ ಅಹಂಕಾರಕೋರರ ಭಾಷೆಯ ಅನ್ಪಡ್ ಅಲ್ಲ.

ಆದರೆ ಅವಳಿಗಿದ್ದ ಸಾಮಾಜಿಕ ಸಂವೇದನೆ, ಕಳಕಳಿಯ ಅರ್ಧದಷ್ಟು ಹೊಣೆಗಾರಿಕೆ ನಮಗೀಗಿಲ್ಲ ಅನಸ್ತದೆ. ಆಕೆಗೆ ಪತ್ರಿಕೆ ಓದುವ, ಅವಕ್ಕೆ ಬರೆಯುವ ಉಮೇದಿನ ಪರಿಚಯದ ಮಾತೇ ಗಾವುದ, ಗಾವುದ ದೂರದ ಮಜಕೂರ. ಆದರೆ ಅಗಾಧ ನೆನಪಿನ ಶಕ್ತಿಯ ಅನನ್ಯ ಜೀವ ನನ್ನವ್ವ.

Contact Your\'s Advertisement; 9902492681

ಎಡ್ರಾಮಿಗೆ ಹೋದಳೆಂದರೆ ತನ್ನ ತವರೂರಿನ ಬಾಲ್ಯದ ಗೆಳತಿ ಅವ್ವಮ್ಮ ಸಾಹುಕಾರ್ತಿಯ (ಮಲ್ಲೇದ ನಿಂಗಪ್ಪ ಸಾಹುಕಾರರ ಪತ್ನಿ ) ಮನೆಭೇಟಿ ಖಾಯಂ. ಇವರಿಬ್ಬರ ತವರೂರಿನ ( ಜಾಲಿಬೆಂಚಿ ) ಈರ್ಬಸಯ್ಯಣ್ಣ, ಗುರ್ತಾಯವ್ವರ ಜಗಳ.. ಗಜುಗದಾಟದಿಂದ ಹಿಡಿದು ಬಾಲ್ಯದ ಕೋಟ್ಯಾನುಕೋಟಿ ನೆನಪುಗಳ ರೀ ಕಾಲ್. ನನ್ನ ಅಪ್ಪ ತೀರಿ ಹೋದ ಮೇಲೆ ಅವ್ವ ( ನಿಂಗಮ್ಮ ) ನಮ್ಮ ಬಳಿಯೇ ಬಂದಿದ್ದಳು.

ರವಿ ಬೆಳಗೆರೆಯಂತಹ ಅನೇಕ ಪತ್ರಕರ್ತ, ಸಾಹಿತಿ ಮಿತ್ರರು ದಾವಣಗೆರೆಯ ನಮ್ಮನೆಗೆ ಬಂದಾಗೆಲ್ಲ ನಮ್ಮವ್ವಗೆ ಅತ್ಯಂತ ಪ್ರೀತಿಯಿಂದ ಮಾತಾಡಿಸಿ, ಅವಳು ಹಾಡುವ ಕಡಕೋಳ ಮಡಿವಾಳಪ್ಪನ ತತ್ವ ಜ್ಞಾನಪದ, ಉರ್ದುವಿನ ಚಕ್ಕಿ ಪದ, ಜಾನಪದಗಳನ್ನು ಜೇನುಪದಗಳಂತೆ ಸವಿಯುತ್ತಿದ್ದರು.

ಹೈ.ಕ.ಗೆ ಸೇರಿದ ನಮ್ಮ ಯಡ್ರಾಮಿಯಿಂದ ನಮ್ಮೂರ ಮೂಲಕ ಮೂರು ಹರದಾರಿ ಸಾಗಿ ಮುಂಬೈ ಕರ್ನಾಟಕದ ಬ್ರಿಟಿಷರ ಆಡಳಿತವಿರುವ ಸಿಂದಗಿ ಮಾರ್ಗ ಉಪಕ್ರಮಿಸಿದರೆ ಸಾಕು ಸುಂಟ್ಯಾಣ., ಇದು ಇಂಗ್ರೇಜಿ ಪ್ರಾಂತ್ಯ. ನಾವು ಮೊಗಲಾಯಿ ಮಂದಿ ಮದಡರು. ಇಂಗ್ರೇಜಿ ಮಂದಿ ಕಂಡಾಪಟಿ ಹುಶೇರಿ. ಸುಂಟ್ಯಾಣ ಅದು ನಮ್ಮ ಹೈ.ಕ. ಭಾಗದ ಗಡಿಭಾಗ. ಸುಂಕದ ಠಾಣೆ ಅದಾಗಿತ್ತು.

ಉರ್ದು, ಮೋಡಿ, ದಖನಿ ಭಾಷೆಯ ಪರಿಚಿತರಾದ ನಮ್ಮನೆ ಮುಂದಿನ ಸಯದಲಿ, ಅಬ್ದುಲ್ಲ ಕಾಕಾ, ಪೊಲೀಸ ಹಣಮಂತ್ರಾಯಗೌಡ ಅವರೆಲ್ಲ ಆಗಿನ ಕಾಲದ ಎರಡೂ ಪ್ರಾಂತ್ಯಗಳ ಕಾನೂನು ಕಟ್ಟಳೆಗಳನ್ನು ಕೆಲಮಟ್ಟಿಗೆ ಬಲ್ಲವರಾಗಿದ್ದರು.

ನಿಜಾಮನ ಮೊಗಲಾಯಿಯ ಗಡಿ ಬಾರ್ಡರಿನ ನಮ್ಮ ಪ್ರಾಂತ್ಯದ ಮಾಲು ಮಾಸೀಲು, ವ್ಯವಹಾರಗಳನ್ನು ಸುರಳೀತ ಮಾಡುವಲ್ಲಿ ಇವರ ನೆರವಿನ ಅಗತ್ಯವಿತ್ತು. ಆಗಿನ ಬಹಳಷ್ಟು ವ್ಯವಹಾರಗಳು ಯಡ್ರಾಮಿ ವರ್ತಕರವೇ ಆಗಿರ್ತಿದ್ದವು. ಕುದುರೆ ಎತ್ತಿನ ಗಾಡಿಗಳೇ ಆಗಿನ ಸರಕು ಸಾಗಾಣಿಕೆ ಮಾಧ್ಯಮಗಳು.

ನಮ್ಮ ಭಾಗದ ಊರುಗಳಿಂದ ಯಳಮೇಲಿ ಎತ್ತಿನ ಸಂತೆಗೆ ಹೋಗುವುದು.. ಸಿಂದಗಿ ಕಳ್ಳರು ಯಡ್ರಾಮಿ ದುಕಾನಗಳಲ್ಲಿ ಮಾಡಿದ ತುಡುಗುತನ.. ಇದೇ ಕಳ್ಳರು ರಾತ್ರೋರಾತ್ರಿ ನಮ್ಮೂರಿನ ಮುರ್ನಾಕು ಹಗೇ ತೆಗೆದು ಕತ್ತೆಗಳ ಮೇಲೆ ಜೋಳ ಸಾಗಿಸಿದ್ದು.. ಇದೆಲ್ಲವನ್ನು ಪ್ರಶ್ನಿಸಿ ಇಂಗ್ರೇಜಿ ಪ್ರಾಂತ್ಯದಲ್ಲಿ ಕಟ್ಲೆ ಕಾರ್ವಾಯಿ ಹೂಡುವುದು ಮೊಗಲಾಯಿಯ ನಮ್ಮವರಿಗೆ ಕಷ್ಟವೇ ಆಗಿತ್ತು.


ಇವತ್ತಿಗೂ ಇಂಗ್ರೇಜಿ ಮಂದಿ ಭಾಳ ಶ್ಯಾಣೇರು. ನಾವು, ನಮಗಾಗುವ ಅನ್ಯಾಯದ ಖಬರು ಇಲ್ಲದವರು. ಪ್ರಾಯಶಃ ಯಡ್ರಾಮಿ ತಾನು ತಾಲೂಕು ಆದ ಮೇಲೂ ಅದು ಹಾಗೇ ಇದೆ.

ಅವ್ವ ಹೇಳುತ್ತಿದ್ದ ಮೇಲಿನ ಈ ಎಲ್ಲ ಸಂಗತಿಗಳಿಗಿಂತ ರಜಾಕಾರರ ಹಾವಳಿಯದು ರೋಚಕಾತಿರೋಚಕ ಕತೆಗಳಿವೆ. ನನ್ನವ್ವನ ಬಾಯಿಯಿಂದಲೇ ನಾನು ಖುದ್ದು ಕೇಳಿ ತಿಳಿದ ಕುತೂಹಲದ ಅನೇಕ ಸಂಗತಿಗಳನ್ನು ಇನ್ನೊಮ್ಮೆ ಹೇಳುವೆ.

ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here