ಕಲಬುರಗಿ: ನಿಷೇಧಾಜ್ಞೆ ಉಲ್ಲಂಘಿಸಿ ರಾವೂರ್ ಗ್ರಾಮದಲ್ಲಿ ನಡೆದ ರಥೋತ್ಸವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸಲಾದ ವಾಡಿ ಪಿಎಸ್ಐ ವಿಜಯ್ ಕುಮಾರ್ ಬಾವಗಿ ಅವರ ಅಮಾನತು ಆದೇಶ ಹಿಂಪಡೆಯುವಂತೆ ಬಿಜೆಪಿ ವಾಡಿ ವಲಯ ಪ್ರಧಾನ ಕಾರ್ಯದರ್ಶಿ ವೀರಣ್ಣಾ ಯಾರಿ ಅವರು ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪಿಎಸ್ಐ ವಿಜಯಕುಮಾರ್ ಬಾವಗಿ ಅವರು ವಾಡಿ ಪಟ್ಟಣದಲ್ಲಿ ತಮ್ಮ ಎರಡು ವರ್ಷದ ಅಧಿಕಾರವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದು, ಅಲ್ಲದೆ ಲಾಕ್ ಡೌನ್ ಆರಂಭವಾದಾಗಿನಿಂದ, ಸಿಲ್ ಡೌನ್ ಏರಿಯಾ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆತರುವಲ್ಲಿ ಶ್ರಮಿಸಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ತಮ್ಮ ಸಿಬ್ಬಂದಿಗಳೊಂದಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಿ ದಕ್ಷ ಆಡಳಿತ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ್ದು, ಇಂತಹ ಅಧಿಕಾರಿಯನ್ನು ಅಮಾನತು ಮಾಡಿರುವುದು ವಿಪರ್ಯಾಸದ ಸಂಗತಿಯಾದೆ, ರಾವೂರ್ ಜಾತ್ರೋತ್ಸವ ಸಮಿತಿ ಜಾತ್ರೆ ನಡೆಸುವುದಿಲ್ಲ ಎಂದು ಪೊಲೀಸ್ ಇಲಾಖೆಗೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟರೂ ಸಹ ಏಕಾಏಕಿ ರಥೋತ್ಸವ ಜರುಗಿಸುವ ಮೂಲಕ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಾರೆ. ಇದರಲ್ಲಿ ಪಿಎಸ್ಐ ಬಾವಗಿ ಬಲಿಯಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಗೃಹಸಚಿವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪಿಎಸ್ಐ ವಿಜಯಕುಮಾರ್ ಬಾವಗಿ ಅವರ ಅಮಾನತು ಆದೇಶ ಹಿಂಪಡೆದು ಪುನಃ ವಾಡಿ ಪೊಲೀಸ್ ಠಾಣೆಗೆ ನಿಯೋಜಿಸುವಂತೆ ಅವರು ಆಗ್ರಹಿಸಿದ್ದಾರೆ.
ಪಕ್ಷದ ಅಧ್ಯಕ್ಷ ಬಸವರಾಜ ಪಾಂಚಳ, ಎಸ್.ಸಿ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಹಾಗೂ ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷರಾದ ಹರಿ ಗಲಾಂಡೆ ಅವರು ಮನವಿ ಮಾಡಿದ್ದಾರೆ.