ಕಲಬುರಗಿ: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಸಂಸದ ಅನಂತ ಕುಮಾರ್ ಹೆಗಡೆರವರ ಸಂಸತ್ ಸದಸ್ಯತ್ವನ್ನು ರದ್ದುಗೊಳಿಸಬೇಕೆಂದು ಸಿಪಿಎಂನ ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ ಒತ್ತಾಯಿಸಿದ್ದಾರೆ.
ಕೊರೋನ ಸೋಂಕಿನ ಮುಸ್ಲಿಮ್ ಸಮುದಾಯದ ವ್ಯಕ್ತಿಗೆ ಸಂಸದ ಅನಂತಕುಮಾರ್ ಹೆಗಡೆ, ಕೊರೋನ ಜಿಹಾದ್ ಎಂಬ ಪಟ್ಟ ಕಟ್ಟುವ ಮೂಲಕ ಸಮಾಜದಲ್ಲಿ ಧ್ವೇಷದ ಭಾವನೆ, ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ವರ್ತಿಸುತ್ತಿದ್ದಾರೆ. ಇಂತವರು ಸಂಸತ್‌ನಲ್ಲಿ ಕೂರಲು ಯೋಗ್ಯರಲ್ಲ.
ತಬ್ಲಿಗಿ ಸಭೆಯ ಮುಖ್ಯಸ್ಥರ ಖಾತೆಗೆ ಹಣ ಜಮೆ ಆಗಿರುವುದನ್ನೇ ಮುಂದಿಟ್ಟುಕೊಂಡು ಕೊರೋನ ಹರಡಲು ಕಳಿಸಿರುವ ಹಣ ಎನ್ನುವ ರೀತಿಯಲ್ಲಿ ಅನಂತ್‌ಕುಮಾರ್ ಹೆಗಡೆ, ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ. ಹಣ ಜಮೆ ಆಗಿರುವ ವಿಚಾರ ಇನ್ನು ತನಿಖೆ ಹಂತದಲ್ಲಿರುವಾಗಲೇ ಇವರು ಕೋಮುವಾದಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಸಮಾಜದ ಸ್ವಸ್ಥ್ಯವನ್ನು ಹಾಳು ಮಾಡುವಂತಹದ್ದಾಗಿದೆ.
ದೇಶಾದ್ಯಂತ ವಲಸೆ ಕಾರ್ಮಿಕರು, ಅಲೆಮಾರಿ ಜನಾಂಗದವರು ಮತ್ತು ಕೂಲಿ ಕಾರ್ಮಿಕರು ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಕಿಂಚಿತ್ತೂ ಕಾಳಜಿ ವ್ಯಕ್ತಪಡಿಸದ ಅನಂತ ಕುಮಾರ್ ಹೆಗಡೆ, ಸದಾ ದೇಶವನ್ನು ಒಡೆಯುವಂತಹ ಮಾತುಗಳನ್ನಷ್ಟೆ ಆಡುತ್ತಾರೆ. ಹೀಗಾಗಿ ಅವರು ಸಂಸದರಾಗಿ ಮುಂದುವರೆಲು ಅರ್ಹರಲ್ಲವೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.