ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಹಿನ್ನೋಟ

0
103

ಕಲಬುರಗಿ: ಹೇರಳ ಅರಣ್ಯ ಸಂಪತ್ತು, ವನ್ಯಜೀವಿಗಳ ತಾಣ, ಆಣೆಕಟ್ಟುಗಳು, ಕಿರು ಜಲಪಾತಗಳು, ಹೀಗೆ ಪ್ರವಾಸಿಗರ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳಿಂದಲೆ ಆಕರ್ಷಿಸುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗಡಿ ತಾಲೂಕು.

ಪ್ರಾಣಿಗಳ ಸಂಕುಲಕ್ಕೆ ಪೂರಕವಾಗಿ ಸುಮಾರು ೧೪೯೫೮ ಹೆಕ್ಟೇರ್ ವಿಸ್ತೀರ್ಣದ ದಟ್ಟವಾದ ಕಾಡನ್ನು ಹೊಂದಿರುವ ಕುಂಚಾವರಂ ಅರಣ್ಯ ಪ್ರದೇಶವನ್ನು ರಾಜ್ಯ ಸರ್ಕಾರವು ವನ್ಯಜೀವಿ ಧಾಮ ಎಂದು ಈಗಾಗಲೆ ಘೋಷಿಸಿದೆ. ತಾಲೂಕಿನಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಂದ್ರಂಪಳ್ಳಿ ಆಣೆಕಟ್ಟು, ಅದಕ್ಕೆ ಸುತ್ತುವರಿದ ಅರಣ್ಯ ಪ್ರದೇಶ ನೋಡಿದರೆ ನೈಸರ್ಗಿಕ ಸೊಬಗನ್ನು ಸವಿದಂತಾಗುತ್ತದೆ. ಎತ್ತಿಪೋತಾ ಮತ್ತು ಗೊಟ್ಟಮಗೊಟ್ಟ ಜಲಪಾತಗಳು, ಸುಕ್ಷೇತ್ರ ಬುಗ್ಗಿ, ನಾಗರಾಳ ಮತ್ತು ಮುಲ್ಲಾಮರಿ ಆಣೆಕಟ್ಟುಗಳು ತಾಲೂಕಿನ ಇತರೆ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಾಗಿವೆ.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯ ಇತರೆ ತಾಲೂಕಿಗೆ ಹೋಲಿಸಿದಲ್ಲಿ ಚಿಂಚೋಳಿ ತಾಲೂಕಿನಲ್ಲಿ ಸರಾಸರಿ ಮಳೆ ಪ್ರಮಾಣ ಹೆಚ್ಚಾಗಿರುತ್ತದೆ. ಹೈ.ಕ.ಭಾಗದ ಮಳೆನಾಡು ಎಂದೆ ಕರೆಯಲ್ಪಡುವ ಚಿಂಚೋಳಿಯಲ್ಲಿ ಇದೀಗ ಎತ್ತ ಕಡೆ ನೋಡಿದರು ಚುನಾವಣೆ ಮಾತುಗಳೆ ಕೇಳಿಬರುತ್ತಿವೆ. ಕಾರಣ ಚಿಂಚೋಳಿ ವಿಧಾನಸಭಾ (ಪ.ಜಾ.) ಮೀಸಲು ಕ್ಷೇತ್ರಕ್ಕೆ ಈಗಾಗಲೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಚುನಾವಣೆ ಕಾವು ಜೋರಾಗಿದೆ. ಮೇ ೧೯ಕ್ಕೆ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ೯೯೦೪೭ ಪುರುಷ ಮತದಾರರು, ೯೪೮೧೪ ಮಹಿಳಾ ಮತದಾರರು ಹಾಗೂ ೧೬ ಇತರೆ ಮತದಾರರು ಸೇರಿದಂತೆ ಒಟ್ಟು ೧೯೩೮೭೭ ಮತದಾರರು ತಮ್ಮ ಹಕ್ಕು ಚಲಾಯಿಸಲು ಅಣಿಯಾಗಿದ್ದಾರೆ. ಹಾಗಾದರೆ ಇದೂವರೆಗೆ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಹಿನ್ನೋಟದ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಚುನಾವಣಾ ಹಿನ್ನೋಟ:-

ರಾಜ್ಯ ರಚನೆಯ ನಂತರ 1957 ರಲ್ಲಿ ಪ್ರಥಮ ಬಾರಿಗೆ ಚಿಂಚೋಳಿ ವಿಧಾನಸಭಾ ಕ್ಷೇತಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೀರೇಂದ್ರ ಪಾಟೀಲ ಅವರು 9539 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿ ಹೊರಹೊಮ್ಮಿದರು.  ಪ್ರತಿಸ್ಪರ್ಧಿ ಸ್ವತಂತ್ರ ಅಭ್ಯರ್ಥಿ ಸೈಬಣ್ಣಾ ನರಸಪ್ಪ 6291 ಮತ ಪಡೆದಿದ್ದರು. ಗೆಲುವಿನ ಅಂತರದ ಮತ 3248 ಆಗಿತ್ತು. ಚುನಾವಣೆಯಲ್ಲಿ ಒಟ್ಟು 49473 ಪೈಕಿ 15830 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್

1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೀರೇಂದ್ರ ಪಾಟೀಲ ಅವರು 13391 ಮತಗಳನ್ನು ಪಡೆಯುವದರ ಮೂಲಕ ಮರು ಆಯ್ಕೆಯಾದರು. ಪ್ರತಿಸ್ಪರ್ಧಿ ಸ್ವತಂತ್ರ ಅಭ್ಯರ್ಥಿ ಶರಣಗೌಡ ಸಿದ್ರಾಮಯ್ಯ ಅವರು 10353 ಮತ ಪಡೆದಿದ್ದರು. ಗೆಲುವಿನ ಅಂತರದ ಮತ 3038 ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು 57980 ಪೈಕಿ 24591 ಮತದಾರರು ಮತ ಚಲಾಯಿಸಿದರು.

1967ರಲ್ಲಿ  ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೀರೇಂದ್ರ ಪಾಟೀಲ ಅವರು ಸತತವಾಗಿ ಮೂರನೇ ಬಾರಿಗೆ 31030 ಮತಗಳನ್ನು ಪಡೆಯುವದರ ಮೂಲಕ ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಸ್ವತಂತ್ರ ಅಭ್ಯರ್ಥಿ ಆರ್.ಆರ್.ಜೆ.ರಾವ್ ಅವರು 3617 ಮತಗಳನ್ನು ಪಡೆದಿದ್ದರು. ಇಲ್ಲಿ ಗೆಲುವಿನ ಅಂತರದ ಮತಗಳು 27413. ಈ ಚುನಾವಣೆಯಲ್ಲಿ 62199 ಪೈಕಿ 37091 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

1972ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ದೇವೇಂದ್ರಪ್ಪ ಘಾಳಪ್ಪ ಅವರು 24364 ಮತ ಪಡೆಯುವದರ ಮೂಲಕ ಜಯ ಸಾಧಿಸಿದರು. ಪ್ರತಿಸ್ಪರ್ಧಿ ಎನ್.ಸಿ.ಒ ಪಕ್ಷದ ಅಭ್ಯರ್ಥಿ ಸಿ.ಪಿ ಬಸವಂತರಾವ ಪಾಟೀಲ ಅವರು 15322 ಮತ ಪಡೆದಿದ್ದರು. ಗೆಲುವಿನ ಅಂತರ 9042 ಮತಗಳಾಗಿದ್ದವು. ಚುನಾವಣೆಯಲ್ಲಿ ಒಟ್ಟು ೭೫೫೮೪ ಪೈಕಿ 47177 ಮತದಾರರು ಮತ ಚಲಾವಣೆ ಮಾಡಿದರು.

೧೯೭೮ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ದೇವೇಂದ್ರಪ್ಪ ಘಾಳಪ್ಪ ಅವರು ೨೫೯೬೩ ಮತ ಪಡೆಯುವದರ ಮೂಲಕ ಮರು ಆಯ್ಕೆಗೊಂಡರು. ಪ್ರತಿಸ್ಪರ್ಧಿ ಜೆ.ಎನ್.ಪಿ ಪಕ್ಷದ ಅಭ್ಯರ್ಥಿ ವೈಜನಾಥ ಪಾಟೀಲ ಅವರು ೧೯೫೦೮ ಮತಗಳನ್ನು ಪಡೆದರು. ಇಲ್ಲಿ ಗೆಲುವಿನ ಅಂತರ ೬೪೫೫ ಮತಗಳಾಗಿದ್ದವು. ಈ ಚುನಾವಣೆಯಲ್ಲಿ ಒಟ್ಟು ೭೭೨೬೬ ಪೈಕಿ ೫೨೧೯೨ ಮತದಾರರು ಮತ ಚಲಾವಣೆ ಮಾಡಿದ್ದರು.

೧೯೮೩ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ದೇವೇಂದ್ರಪ್ಪ ಘಾಳಪ್ಪ ಅವರು ೧೯೫೧೩ ಮತ ಪಡೆಯುವದರ ಮೂಲಕ ಸತತವಾಗಿ ೩ನೇ ಬಾರಿಗೆ ಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದರು. ಪ್ರತಿಸ್ಪರ್ಧಿ ಜೆ.ಎನ್.ಪಿ ಪಕ್ಷದ ಅಭ್ಯರ್ಥಿ ವೈಜನಾಥ ಪಾಟೀಲ ಅವರು ೧೯೪೨೫ ಮತಗಳು ಪಡೆದಿರುವುದರಿಂದ ದೇವೇಂದ್ರಪ್ಪ ಘಾಳಪ್ಪ ಅವರ ಗೆಲುವಿನ ಅಂತರ ಕೇವಲ ೮೮ ಮತಗಳಾಗಿದ್ದವು. ಈ ಚುನಾವಣೆಯಲ್ಲಿ ಒಟ್ಟು ೮೫೪೯೩ ಪೈಕಿ ೫೨೨೧೧ ಮತದಾರರು ಮತ ಚಲಾಯಿಸಿದ್ದರು.

೧೯೮೫ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೀರಯ್ಯ ಸ್ವಾಮಿ ಅವರು ೨೦೩೮೭ ಮತ ಪಡೆಯುವದರ ಮೂಲಕ ಜಯ ತಮ್ಮದಾಗಿಸಿಕೊಂಡಿದ್ದರು. ಪ್ರತಿಸ್ಪರ್ಧಿ ಜೆ.ಎನ್.ಪಿ ಪಕ್ಷದ ಚಂದರರಾವ ಪಾಟೀಲ ಅವರು ೧೮೮೪೭ ಪಡೆದಿದ್ದರು. ಇಲ್ಲಿ ಗೆಲುವಿನ ಮತಗಳ ಅಂತರ ೧೫೪೦ ಆಗಿತ್ತು. ಚುನಾವಣೆಯಲ್ಲಿ ಒಟ್ಟು ೯೩೦೬೭ ಪೈಕಿ ೪೪೯೨೫ ಮತದಾರರು ಮತ ಚಲಾಯಿಸಿದರು.

೧೯೮೯ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೀರೇಂದ್ರ ಪಾಟೀಲ ಅವರು ೨೯೭೬೨ ಮತ ಪಡೆಯುವದರ ಮೂಲಕ ವಿಜಯಶಾಲಿಯಾದರು. ಪ್ರತಿಸ್ಪರ್ಧಿ ಜೆ.ಎನ್.ಪಿ ಪಕ್ಷದ ಅಭ್ಯರ್ಥಿ ವೈಜನಾಥ ಪಾಟೀಲ ಅವರು ೨೭೭೧೭ ಮತ ಪಡೆದಿದ್ದರು. ವೀರೇಂದ್ರ ಪಾಟೀಲ ಅವರ ಗೆಲುವಿನ ಅಂತರ ೨೦೪೫ ಮತಗಳು. ಈ ಚುನಾವಣೆಯಲ್ಲಿ ಒಟ್ಟು ೧೧೫೯೪೫ ಪೈಕಿ ೭೭೯೨೩ ಮತದಾರರು ಮತ ಚಲಾವಣೆ ಮಾಡಿದ್ದರು.

೧೯೯೪ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ವೈಜನಾಥ ಪಾಟೀಲ ಅವರು ೫೬೩೭೧ ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೈಲಾಸನಾಥ ಪಾಟೀಲ ಅವರು ೧೭೩೨೦ ಮತ ಪಡೆದುಕೊಂಡಿದ್ದರು. ಗೆಲವಿನ ಅಂತರ ೩೯೦೫೧ ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು   ೧೨೫೮೩೧ ಪೈಕಿ ೮೩೬೨೪  ಮತದಾರರು ಮತ ಚಲಾಯಿಸಿದರು.

೧೯೯೯ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಕೈಲಾಸನಾಥ ಪಾಟೀಲ ಅವರು ೪೨೮೧೪ ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ  ಜೆಡಿಎಸ್ ಪಕ್ಷದ ಅಭ್ಯರ್ಥಿ ವೈಜನಾಥ ಪಾಟೀಲ ಅವರು ೧೬೫೫೧ ಮತಗಳನ್ನು ಪಡೆದರು. ಇಲ್ಲಿ ಗೆಲುವಿನ ಅಂತರ ೨೬೨೬೩ ಆಗಿತ್ತು. ಚುನಾವಣೆಯಲ್ಲಿ ಒಟ್ಟು ೧೩೭೬೭೨ ಪೈಕಿ ೮೬೬೩೫ ಮತದಾರರು ಮತ ಚಲಾಯಿಸಿದರು.

೨೦೦೪ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ವೈಜನಾಥ ಪಾಟೀಲ ಅವರು ೩೬೧೮೪ ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೈಲಾಸನಾಥ ಪಾಟೀಲ ಅವರು ೩೧೦೬೭ ಮತ ಪಡೆದುಕೊಂಡಿದ್ದರು. ವೈಜನಾಥ ಪಾಟೀಲ ಅವರ ಗೆಲುವಿನ ಅಂತರ ೫೧೧೭ ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು ೧೫೬೨೯೩ ಪೈಕಿ ೯೨೬೨೦ ಮತದಾರರು ಮತ ಚಲಾಯಿಸಿದರು.

ಕ್ಷೇತ್ರ ಪುನರ್ವಿಂಗಡನೆಯಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರವನ್ನು ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ನಂತರ ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಸುನೀಲ ವಲ್ಯಾಪುರೆ ಅವರು ೩೫೪೯೧ ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಬುರಾವ ಚವ್ಹಾಣ ಅವರು ೨೮೫೮೦ ಮತಗಳನ್ನು ಪಡೆದರು. ಸುನೀಲ ವಲ್ಯಾಪುರೆ ಅವರ ಗೆಲುವಿನ ಅಂತರ ೬೯೧೧ ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು ೧೫೬೦೬೪ ಪೈಕಿ ೮೪೨೯೫  ಮತದಾರರು ಮತ ಚಲಾವಾಣೆ ಮಾಡಿದರು.

೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಡಾ. ಉಮೇಶ ಜಾಧವ ಅವರು ೫೮೫೯೯ ಮತಗಳನ್ನು ಪಡೆದು ಜಯಸಾಧಿಸಿದರು. ಪ್ರತಿಸ್ಪರ್ಧಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಸುನೀಲ ವಲ್ಯಾಪುರೆ ಅವರು ೩೨೫೩೯ ಮತಗಳನ್ನು ಪಡೆದುಕೊಂಡಿದ್ದರು. ಇಲ್ಲಿ ಗೆಲುವಿನ ಅಂತರ ೨೬೦೬೦ ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು ೧೬೯೨೯೨ ಪೈಕಿ ೧೧೨೯೮೩ ಮತದಾರರು ಮತ ಚಲಾಯಿಸಿದ್ದರು.

೨೦೧೮ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಡಾ. ಉಮೇಶ ಜಾಧವ ಅವರು ೭೩೯೦೫ ಮತಗಳನ್ನು ಪಡೆದು ಎರಡನೇ ಬಾರಿಗೆ ಮರು ಆಯ್ಕೆಗೊಂಡರು. ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುನೀಲ ವಲ್ಯಾಪುರೆ ಅವರು ೫೪೬೯೩ ಮತಗಳನ್ನು ಪಡೆದುಕೊಂಡಿದ್ದರು. ಇಲ್ಲಿ ಗೆಲುವಿನ ಅಂತರ ೧೯೨೧೨ ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು ೧೯೩೫೯೦ ಪೈಕಿ ೧೩೨೫೫೭ ಮತದಾರರು ತಮ್ಮ ಹಕ್ಕನ್ನು ಚಲಾಯಿಸದ್ದರು.

-ರವಿ ಮಿರಸ್ಕರ್

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here