ಸುರಪುರ: ಜಗತ್ತಿನಲ್ಲಿ ತನ್ನ ವಿಸ್ತಾರವನ್ನು ಮುಂದುವರೆಸಿರುವ ಕೊರೊನಾ ವೈರಸ್ ಭಾರತದಲ್ಲಿಯೂ ನಿತ್ಯವು ಮರಣ ಮೃದಂಗ ಬಾರಿಸುತ್ತಿದೆ.ಅಲ್ಲದೆ ನಮ್ಮ ಪಕ್ಕದ ಜಿಲ್ಲೆಗಳಾದ ಕಲಬುರ್ಗಿ ಮತ್ತು ವಿಜಯಪುರದಲ್ಲಿ ಹರಡುತ್ತಾ ಸಾಗಿದೆ.ಆದರೆ ಯಾದಗಿರಿ ಜಿಲ್ಲೆಯಲ್ಲಿ ಅದರಂತೆ ಸುರಪುರ ತಾಲೂಕಿನಲ್ಲಿ ಯಾವುದೇ ಪ್ರಕರಣ ಕಂಡುಬರದಿರುವ ಬಗ್ಗೆ ಜನರು ಸಂತಸದಲ್ಲಿರುವಾಗ ರಂಗಂಪೇಟೆಯಲ್ಲಿ ಸಂತೆ ನಡೆಸುವ ಮೂಲಕ ವ್ಯಾಪಾರದಾರರು ತಾಲೂಕು ಆಡಳಿತಕ್ಕೆ ತಲೆನೋವಾಗಿದ್ದಾರೆ.
ಪ್ರತಿ ಶುಕ್ರವಾರ ನಡೆಯುತ್ತಿದ್ದ ರಂಗಂಪೇಟೆಯಲ್ಲಿನ ಸಂತೆಯು ಈ ಶುಕ್ರವಾರವು ಕೂಡ ಕೊರೊನಾ ಭೀತಿಯಿಲ್ಲದೆ ಎಂದಿನಂತೆ ಬೆಳಿಗ್ಗೆ ಏಳು ಗಂಟೆಗೆ ತರಕಾರಿ ಹಣ್ಣು ಹಂಪಲುಗಳ ಮೂಟೆಯೊಂದಿಗೆ ಆಗಮಿಸಿದ ವ್ಯಾಪಾರಿಗರು ತಮ್ಮ ಸಂತೆಯನ್ನು ಆರಂಭಿಸಿದರು.ಇದರ ಸುದ್ದಿ ತಿಳಿಯುತ್ತಿದ್ದಂತೆ ಜನರು ತರಕಾರಿ ಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಕೊರೊನಾ ವೈರಸ್ ಭೀತಿಯಾಗಲಿ,ಲಾಕ್‌ಡೌನ್ ಪಾಲನೆಯಾಗಲಿ ಮರೆತರು.
ಹನ್ನೊಂದು ಗಂಟೆಯವರೆಗೆ ನಡೆದ ಸಂತೆಯ ಸುದ್ದಿ ತಿಳಿದ ಪೊಲೀಸ್ ಅಧಿಕಾರಿಗಳು ಪಿಎಸ್‌ಐ ಚೇತನ್ ಹಾಗು ಮತ್ತವರ ಸಿಬ್ಬಂದಿಗಳೊಂದಿಗೆ ಆಗಮಿಸಿ ಸಂತೆ ನಡೆಯುತ್ತಿರುವುದನ್ನು ಬಂದ್ ಮಾಡಿಸಿದರು.ಇದಕ್ಕೆ ನಗರಸಭೆಯ ಕಾರ್ಮಿಕರು ಕೂಡ ಸಾಥ್ ನೀಡಿ ಸಂತೆ ಬಂದ್ ಮಾಡುವಲ್ಲಿ ಯಶಸ್ವಿಯಾದರು.ಆದರೆ ಬೆಳಿಗ್ಗೆಯಿಂದ ನಡೆದ ಸಂತೆಯಲ್ಲಿ ಜನರು ಮುಗಿ ಬೀಳುವ ಜೊತೆಗೆ ಗುರುವಾರವೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಂತೆ ಆದೇಶ ಮಾಡಿದ್ದರು.
ಆದರೆ ಸಂತೆಯಲ್ಲಿ ನೆರೆದವರಲ್ಲಿನ ಬಹುತೇಕರು ಮಾಸ್ಕ್ ಧರಿಸದೆ ಬಂದು ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿದರು.ಇದರಿಂದ ಬೆಸರಗೊಂಡಿರುವ ನಗರದ ಜನರು ಮುಂದಿನ ವಾರವಾದರೂ ಮುಂಜಾಗೃತೆ ವಹಿಸಿ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಆಗ್ರಹಿಸುತ್ತಿದ್ಧಾರೆ.