ಕಲಬುರಗಿ: ಮಾತೆ ಎಂದರೆ ಅನ್ನ ಕೊಡುವವಳು, ಮಾತೆ ಎಂದರೆ ಕಷ್ಟ ಕರಗಿಸುªವವಳು, ಮಾತೆ ಎಂದರೆ ಆಶ್ರಯದಾತಳು, ಮಾತೆ ಎಂದರೆ ಅನಘ್ಯ ರತ್ನ, ಅಂತಹ ಮಹಾಮಾತೆಯಾಗಿ ಸಾವಿರಾರು ಜೀವಕ್ಕೆ ನೆಲೆ ಕೊಟ್ಟು, ಎಲ್ಲರ ಆಶ್ರಯದಾತರಾಗಿರುವ ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ವಿಶ್ವ ತಾಯಂದಿರ ದಿನ ಆಚರಿಸಿಕೊಂಡರು.
ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪನವರ ಧರ್ಮ ಪತ್ನಿ ಹಾಗೂ 9ನೇ ಪೀಠಾಧಿಪತಿ ಚಿ. ಪೂಜ್ಯ ದೊಡ್ಡಪ್ಪ ಅಪ್ಪನವರ ಜನ್ಮದಾತೆಯಾದ ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ದಾಸೋಹ ಮಹಾಮನೆಯಲ್ಲಿ ರವಿವಾರ ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ಮನೆಯಲ್ಲಿ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು.
ಮಾತೋಶ್ರೀ ಹಾಗೂ ಮಕ್ಕಳೆಲ್ಲರೂ ಒಂದೇ ರೀತಿಯಾದ ಕೆಂಪು, ಕಂದುಬಣ್ಣದ ವಸ್ತ್ರವನ್ನು ಧರಿಸಿದ್ದರು. ಚಿ.ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಸಹೋದರಿ ಮಹೇಶ್ವರಿ ಎಸ್.ಅಪ್ಪಾ, ಕೋಮಲಾ ಎಸ್.ಅಪ್ಪಾ, ಶಿವಾನಿ ಎಸ್.ಅಪ್ಪಾ ‘ಹಣೆಗೆ ವಿಭೂತಿ ಚೆಂದ, ದೇವರಿಗೆ ಹೂ ಚೆಂದ, ನನಗೆ ನನ್ನ ತಾಯಿ ಚೆಂದ, ರುಚಿಕರವಾಗಿ ಅಡುಗೆ ಮಾಡಿ ಪ್ರೀತಿಯಿಂದ ಊಣಬಡಿಸುವ ನನ್ನ ತಾಯಿ ನನ್ನ ಪ್ರಪಂಚ’ ಎಂಬ ಮುಂತಾದ ಅಂಶಗಳಿಂದ ಕೂಡಿದ ಹಾಗೂ ಮನೆಯಲ್ಲೆ ತಯಾರಿಸಿದ ಗ್ರೀಟಿಂಗ್ ಕಾರ್ಡ ಉಡುಗೊರೆಯಾಗಿ ನೀಡಿ ಸಂತಸಪಟ್ಟರು.