ಚಿಂಚೋಳಿ ಉಪಚುನಾವಣೆ: ಅಂದಾಜು ಶೇ. 70.72 ರಷ್ಟು ಮತದಾನ

0
89

ಕಲಬುರಗಿ: ಚಿಂಚೋಳಿ ಮೀಸಲು (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ ರವಿವಾರ ನಡೆದ ಉಪ ಚುನಾವಣೆಯಲ್ಲಿ ಶೇಕಡ ಅಂದಾಜು 70.72 ರಷ್ಟು ಮತದಾನವಾಗಿದೆ. ಇನ್ನುಳಿದಂತೆ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದ್ದಾರೆ.

ಬೆಳಿಗ್ಗೆ ಮತದಾನ ನಿಧಾನ ಗತಿಯಲ್ಲಿ ಆರಂಭವಾಗಿ ಬೆಳಿಗ್ಗೆ 9 ಗಂಟೆಗೆ ಶೇ. 7.88 ರಷ್ಟು ಮತದಾನವಾಯಿತು. ನಂತರ 11 ಗಂಟೆಗೆ ಶೇ. 23.12 ರಷ್ಟು ಮತದಾನವಾಯಿತು. ಮಧ್ಯಾಹ್ನ 1 ಗಂಟೆಗೆ ಮತದಾನ ಚೇತರಿಕೆ ಕಂಡು ಶೇ. 40.40 ರಷ್ಟು ಮತದಾನವಾಯಿತು. ನಂತರ ಬಿರುಸಿನಿಂದ ಸಾಗಿ ಮಧ್ಯಾಹ್ನ 3 ಗಂಟೆಗೆ ಶೇ. 53.66 ರಷ್ಟಕ್ಕೆ ಏರಿಕೆ ಕಂಡಿತು. ಬಿಸಿಲಿನ ತಾಪಮಾನ ತಗ್ಗಿ ಹೊತ್ತು ಇಳಿಯುತ್ತಿದ್ದಂತೆ ಮತದಾರರು ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಜೆ 5 ಗಂಟೆಗೆ ಹೊತ್ತಿಗೆ 65.14 ರಷ್ಟು ಮತದಾನವಾಯಿತು. ಸಂಜೆ 5 ಗಂಟೆಯ ನಂತರ ಮತದಾರರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತರು. ಈ ಪರಿಣಾಮ ಅಂತಿಮವಾಗಿ ಅಂದಾಜು ಶೇಕಡ 70.72 ರಷ್ಟು ಮತದಾನವಾಗಿದೆ. ನಿಖರ ಮಾಹಿತಿ ತಡರಾತ್ರಿ ಲಭ್ಯವಾಗುವ ಸಾಧ್ಯತೆಯಿದೆ.

Contact Your\'s Advertisement; 9902492681

ಸಖಿ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ: ಚಿಂಚೋಳಿಯ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಮತಗಟ್ಟೆ ಸಂಖ್ಯೆ-131) ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟೇಶಕುಮಾರ ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಮತಗಟ್ಟೆಯಲ್ಲಿ ಕಂಟ್ರೋಲ್ ಯುನಿಟ್ ಸೇರಿದಂತೆ ಎಲ್ಲ ಪ್ರಕ್ರಿಯೆ ಹಾಗೂ ಮತದಾನದ ಶೇಕಡವಾರು ವಿವರ ಕುರಿತು ಮತಗಟ್ಟೆ ಪಿ.ಆರ್.ಓ.ಗಳಿಂದ ಮಾಹಿತಿ ಪಡೆದರು.
ಮತ ಚಲಾಯಿಸಿದ ನವ ದಂಪತಿಗಳು:- ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಮಶೆಟ್ಟಿ-ನಾಗವೇಣಿ ಹಾಗೂ ವೀರಣ್ಣ-ಲಕ್ಷ್ಮೀ ಎಂಬ ಎರಡು ನವ ದಂಪತಿಗಳು ಮದುವೆ ಛತ್ರದಿಂದ ನೇರವಾಗಿ ರಟಕಲ್ ಗ್ರಾಮದಲ್ಲಿನ ಮತಗಟ್ಟೆಗೆ ತೆರಳಿ ತಮ್ಮ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವ ಸಾರಿದರು. ಅದೇ ರೀತಿ ಚಿಂಚೋಳಿ ಕ್ಷೇತ್ರದ ಚಿಮ್ಮ ಇದಲಾಯಿ ಗ್ರಾಮದಲ್ಲಿ ವೀರಭದ್ರಪ್ಪ ಮತ್ತು ಸಪ್ನ ಅವರು ನವಬಾಳಿಗೆ ಹೆಜ್ಜೆಯಿಟ್ಟರು. ಮದುವೆಯಾದ ಬಳಿಕ ನೇರವಾಗಿ ಮತಗಟ್ಟೆಗೆ ಆಗಮಿಸಿದ ಮಧುಮಗ ವೀರಭದ್ರಪ್ಪ ಅವರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು.

ವಯೋವೃದ್ಧೆಯಿಂದ ಮತದಾನ: ಕಾಳಗಿ ಪಟ್ಟಣದ ಮತಗಟ್ಟೆ ಸಂಖ್ಯೆ 215ರಲ್ಲಿ 105 ವರ್ಷದ ವಯೋವೃದ್ಧೆ ಬಸಮ್ಮ ಅವರು ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆಗಳಲ್ಲಿ ರ್ಯಾಂಪ್ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಯೋವೃದ್ಧರು, ವಿಕಲಚೇತನರು ಮತದಾನ ಮಾಡಿದರು.

ಮತಗಟ್ಟೆಗಳಲ್ಲಿ ಮೂಲ ಸೌಕರ್ಯ: ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬುದು ಈ ಬಾರಿ ಚುನಾವಣಾ ಆಯೋಗದ ಘೋಷವಾಕ್ಯವಾಗಿತ್ತು. ಈ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಾದ ನೀರು, ಬೆಳಕು, ನೆರಳು ಪರದೆ, ಶೌಚಾಲಯ, ಪ್ರಥಮ ಚಿಕಿತ್ಸಾ ಕಿಟ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here