ಸುರಪುರ: ಜೂನ್ ೨೫ ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ನಹರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಮಾತನಾಡಿ, ಕೋವಿಡ್-೧೯ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಸಲಾಗುತ್ತಿದ್ದು,ಪ್ರತಿಯೊಂದು ಇಲಾಖೆಯವರು ಪರೀಕ್ಷಾ ಪ್ರಕ್ರೀಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಆರೋಗ್ಯ ಇಲಾಖೆಯ ಪಾತ್ರವು ಮುಖ್ಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳ ಫೀವರ್ ಚೆಕ್,ಸಾಮಾಜಿಕ ಅಂತರ,ಮಾಸ್ಕ್ ವಿತರಣೆ ಹಾಗು ಸ್ಯಾನಿಟೈಜರ್ ವಿತರಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರ ಅಂಬ್ರೇಶ ಮಾತನಾಡಿ,ಈಬಾರಿಯ ಪರೀಕ್ಷೆ ನಡೆಸುವುದು ತುಂಬಾ ಮುತುವರ್ಜಿಯಿಂದ ಕೂಡಿದೆ,ಆದ್ದರಿಂದ ಎಲ್ಲಾ ಇಲಾಖೆಗಳು ಇದರಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಆಯಾ ಇಲಾಖೆಗಳು ತಮ್ಮ ಜವಬ್ದಾರಿಯನ್ನು ನಿಭಾಯಿಸಬೇಕಿದೆ. ಮುಖ್ಯವಾಗಿ ಸಾರಿಗೆ ಇಲಾಖೆಯ ಮೇಲೆ ಹೆಚ್ಚಿನ ಜವಬ್ದಾರಿ ಇದ್ದು,ಪ್ರತಿ ಗ್ರಾಮದ ವಿದ್ಯಾರ್ಥಿಗಳನ್ನು ಸರಿಯಾದ ಸಮಯಕ್ಕೆ ಕರೆತರುವ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವದಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು.
ಪೊಲೀಸ್ ಇಲಾಖೆಯು ತುಂಬಾ ಮುಖ್ಯವಾದ ಪಾತ್ರವಹಿಸಲಿದ್ದು ಇಡೀ ಪರೀಕ್ಷಾ ಪ್ರಕ್ರೀಯೆ ಮುಗಿಯುವವರೆಗೂ ಯಾವುದೆ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸುಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೆಕಾರ ಮಾತನಾಡಿ,ಈಗಾಗಲೆ ಹತ್ತನೆ ತರಗತಿ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಆಯಾ ಶಾಲೆಗಳಲ್ಲಿ ನೀಡಲಾಗುತ್ತಿದೆ.ಪರೀಕ್ಷಾ ಕೇಂದ್ರದಲ್ಲಿಯೂ ಯಾವುದೆ ರೀತಿಯ ಕೋವಿಡ್-೧೯ ನಿಯಮಗಳಿಗೆ ಧಕ್ಕೆ ಬಾರದಂತೆ ಕ್ರಮ ಮಹಿಸಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಪಿಎಸ್‌ಐ ಚೇತನ್ ಇದ್ದರು.ಸಭೆಯಲ್ಲಿ ಅಕ್ಷರ ದಾಸೋಹದ ಮೌನೇಶ ಕಂಬಾರ,ಸಾರಿಗೆ ಘಟಕ ವ್ಯವಸ್ಥಾಪಕ ಭದ್ರಪ್ಪ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿದ್ದರು.