ಬಾಗಲಕೋಟೆ: ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಸುತ್ತಲಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದುರಸ್ತಿಗೆ ಸಂಬಂಧಿಸಿದಂತೆ ತಾಂತ್ರಿಕ ನೆರವು ಕೋರಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಜ್ಞರ ಮೊರೆ ಹೋಗಿದೆ.
ಬಾವಿಯ ಬಿರುಕು ಮುಚ್ಚುವ ಕಾಮಗಾರಿಗೆ 15ರಿಂದ 20 ದಿನ ತಗುಲಲಿದೆ. ಈ ವೇಳೆ ಐಕ್ಯಮಂಟಪಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಬಹುದು. ಇಲ್ಲವೇ ರಾತ್ರಿ ವೇಳೆ ಕೆಲಸ ಮಾಡಿ ಹಗಲು ಹೊತ್ತು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
22 ವರ್ಷಗಳ ನಂತರ ದುರಸ್ತಿ
1963ರಲ್ಲಿ ನಾರಾಯಣಪುರ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ವೇಳೆ ಕೂಡಲಸಂಗಮದ ಐಕ್ಯಸ್ಥಳ ಮುಳುಗಡೆ ಆಗಲಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ವೇಳೆ ಐಕ್ಯಸ್ಥಳದ ಸುತ್ತಲೂ ಮಂಟಪ ನಿರ್ಮಿಸಿ ಸಂರಕ್ಷಣೆಗೆ ರೂ. 2.2 ಲಕ್ಷ ವೆಚ್ಚದಲ್ಲಿ ಸುತ್ತಲೂ 18 ಮೀಟರ್ ವ್ಯಾಸದ ದುಂಡಾಕಾರದ ಬಾವಿ ನಿರ್ಮಿಸಿದ್ದರು.
1997ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ವೇಳೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ರಚಿಸಿ ರೂ. 36 ಕೋಟಿ ಅನುದಾನ ನೀಡಿದ್ದರು. ಮಂಡಳಿಯ ಅಂದಿನ ಆಯುಕ್ತ ಎಸ್.ಎಂ.ಜಾಮದಾರ ನೇತೃತ್ವದಲ್ಲಿ ಐಕ್ಯಮಂಟಪದ ನವೀಕರಣ ಕಾರ್ಯ ನಡೆದಿತ್ತು.
ಮೇಲಧಿಕಾರಿಗಳಿಗೆ ಮಾಹಿತಿ ರವಾನೆ: ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ಐಕ್ಯಮಂಟಪದ ದುರಸ್ತಿಗೆ ಒತ್ತು ನೀಡಲಾಗುವುದು. ಆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಹೊಂದಿರುವ ಬೆಂಗಳೂರಿನ ಮತ್ತೊಂದು ಕನ್ಸಲ್ಟೆನ್ಸಿ ಸಂಸ್ಥೆಯಿಂದ ಅಭಿಪ್ರಾಯ ಪಡೆಯಲಾಗುವುದು’ಎಂದು ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ತಿಳಿಸಿದರು.
‘ಕಾಮಗಾರಿ ವೇಳೆ ಪ್ರವಾಸಿಗರ ಭೇಟಿ ನಿಷೇಧದ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ವರ್ಷದ ಎಂಟು ತಿಂಗಳು ನಾರಾಯಣಪುರ ಜಲಾಶಯದ ಕೃಷ್ಣೆಯ ಹಿನ್ನೀರು ಐಕ್ಯಮಂಟಪದ ಸುತ್ತಲೂ ವ್ಯಾಪಿಸುತ್ತದೆ. ಹೆಚ್ಚಿನ ಅವಧಿ ನೀರಿನಲ್ಲಿಯೇ ಇರುತ್ತದೆ. ಹಾಗಾಗಿ ಅದರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ದುರಸ್ತಿ ಕಾರ್ಯಕ್ಕೆ ನೆರವಾಗಲು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಈ ಮೊದಲು ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್‌ಎಲ್) ತಾಂತ್ರಿಕ ವಿಭಾಗದ ಮೊರೆ ಹೋಗಿತ್ತು. ಕೆಬಿಜೆಎನ್‌ಎಲ್ ತಜ್ಞರು ಪರಿಶೀಲಿಸಿ ವರದಿ ನೀಡಿದ್ದಾರೆ. ಕೂಡಲೇ ದುರಸ್ತಿ ಕಾರ್ಯ ಆರಂಭಿಸಿ ಐಕ್ಯಮಂಟಪಕ್ಕೆ ಭೇಟಿ ನೀಡುವವರ ಸುರಕ್ಷತೆಗೆ ಒತ್ತು ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ.