ಶಹಾಬಾದ: ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಪ್ರಾರಂಭವಾದ ಮಳೆ ಬುಧವಾರ ರಾತ್ರಿ ಸುರಿದಿದ್ದರಿಂದ ಹಳ್ಳಕೊಳ್ಳಗಳಿಗೆ ಮಳೆಯ ನೀರು ತುಂಬಿಬಂದು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದ್ದರಿಂದ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಹೊನಗುಂಟಾ ರಸ್ತೆಯಲ್ಲಿರುವ ಗೋಳಾ (ಕೆ) ಗ್ರಾಮದ ಸುಮಾರು ೩೦ ಎಕರೆಗಿಂತಲೂ ಹೆಚ್ಚು ಹೊಲಗಳಿಗೆ ನೀರು ನುಗ್ಗಿದ್ದರಿಂದ ತೊಗರಿ, ಹೆಸರು, ಅಲಸಂದಿ, ಹತ್ತಿ, ಉದ್ದು ಬೆಳೆಗಳು ನೀರಿನಲ್ಲಿ ಮುಳಗಿದ್ದರಿಂದ ಬೆಳೆ ಹಾನಿಯಾಗಿದೆ.
ಮಳೆಗಾಲದ ಪ್ರಾರಂಭದಲ್ಲಿಯೇ ರೈತರು ಹೆಸರು, ಉದ್ದು, ಬಿತ್ತಿದ್ದರಿಂದ ಈ ಬೆಳೆಗಳು ಹೂವು ಬಿಡುವ ಹಂತ ತಲುಪಿದ್ದವು. ಈಗ ಭಾರಿ ಮಳೆಯಿಂದ ಹಳ್ಳದ ನೀರು ಹೊಲಕ್ಕೆ ನುಗ್ಗಿದ್ದು, ಬೆಳೆ ಸಂಪೂರ್ಣ ಮುಳುಗಿದೆ.
ವಿಷಯ ತಿಳಿದ ತಾಲೂಕ ತಹಶೀಲ್ದಾರ ಸುರೇಶ ವರ್ಮಾ ಅವರು ಕೂಡಲೇ ನೀರು ನುಗ್ಗಿದ ಹೊಲಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಲು ಗ್ರಾಮ ಲೆಕ್ಕಿಗರಿಗೆ ಆದೇಶ ನೀಡಿದ್ದಾರೆ.ಅಲ್ಲದೇ ಬೆಳೆ ಹಾನಿ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದು, ಹೊಲಗಳಿಗೆ ಗ್ರಾಮ ಲೇಖಪಾಲಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಳೆ ಬಂದಾಗಲೆಲ್ಲಾ ಸಮಸ್ಯೆ: ಹೊನಗುಂಟಾ ರಸ್ತೆಯ ವಡ್ಡರವಾಡಿ ಸಮೀಪದಲ್ಲಿ ಹೊಲದ ಮಧ್ಯ ಸಣ್ಣ ಹಳ್ಳ ಹರಿದು ಹೋಗುತ್ತಿದ್ದು, ಈ ಹಳ್ಳದ ನೀರು ಹರಿದು ಹೋಗಲು ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಕಲ್‌ವಟ್‌ಗೆ ಸಣ್ಣ ಪ್ರಮಾಣದ ಪೈಪುಗಳನ್ನು ಅಳವಡಿಸಿದ್ದರಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗದೆ, ಹೊಲಗಳಿಗೆ ನುಗ್ಗುತ್ತವೆ ಎಂದು ರೈತ ರಾಜೇಶ ಯನಗುಂಟಿಕರ್ ತಿಳಿಸಿದರು.
ಸರ್ಕಾರ ಕೂಡಲೇ ಹೊಲದ ಬದುವಿಗೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕಕು.ಅಲ್ಲದೇ ಪ್ರತಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.ಅಲ್ಲದೇ ಹೊಲಗಳಲ್ಲಿರುವ ವಿದ್ಯುತ್ ಕಂಬಗಳು ಮಳೆಯಿಂದ ಬೀಳುವ ಹಂತದಲ್ಲಿ ಜೆಸ್ಕಾಂ ಇಲಾಖೆ ಕೂಡಲೇ ಕಂಬಗಳು ಉರುಳಿ ಬೀಳದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.