ಲಾಕ್‌ಡೌನ್ ಧಿಕ್ಕರಿಸಿ ಖರೀದಿಗೆ ಮುಗಿಬಿದ್ದ ಗ್ರಾಹಕರು

0
71

ವಾಡಿ: ಜಿಲ್ಲೆಯಾಧ್ಯಂತ ತಲ್ಲಣಿಸಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಆದೇಶಕ್ಕೆ ಜನರು ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬುದಕ್ಕೆ ವಾರದ ಸಂತೆಯಲ್ಲಿ ಕಂಡುಬಂದ ಜನಜಂಗುಳಿಯೇ ಸಾಕ್ಷಿ ನೀಡಿತು.

ಪಟ್ಟಣದಲ್ಲಿ ನಡೆದ ವಾರದ ಸಂತೆಯಲ್ಲಿ ಮುಗಿಬಿದ್ದು ತರಕಾರಿ ಖರೀದಿಗೆ ನೂಕುನುಗ್ಗಲು ನಡೆಸುವ ಮೂಲಕ ಗ್ರಾಹಕರು ಸಾಕ್ರಾಮಿಕ ರೋಗದ ಸಾಮಾಜಿಕ ಅಂತರ ಧಿಕ್ಕರಿಸಿದ ದೃಶ್ಯಗಳು ಕಂಡು ಬಂದವು. ರಸ್ತೆಗಳಲ್ಲಿ ಬೈಕ್ ಸವಾರರ ಸಂಚಾರ ಸಾಮಾನ್ಯವಾಗಿತ್ತು. ತರಕಾರಿ, ಹಣ್ಣು, ದಿನಸಿ ಅಂಗಡಿಗಳ ಮುಂದೆ ಗ್ರಾಹಕರು ಸುತ್ತುವರೆದು ಸಿಗುತ್ತೋ ಇಲ್ಲವೋ ಎಂಬಂತೆ ಖರೀದಿಯಲ್ಲಿ ತೊಡಗಿದ್ದರು, ಪ್ರಮುಖ ವೃತ್ತಗಳಲ್ಲಿ ಗುಂಪು ಗುಂಪಾಗಿ ನಿಂತು ಹರಟೆ ಹೊಡೆಯುವವರ ಗ್ಯಾಂಗ್ ನಿರ್ಭಯವಾಗಿ ಸಮಯ ಕಳೆಯುತ್ತಿತ್ತು. ಜನದಟ್ಟಣೆ ಕಂಡರೂ ನಮಗೇನು ಸಂಬಂದವಿಲ್ಲದಂತೆ ವೀಕ್ಷಿಸುತ್ತಿದ್ದ ಪೊಲೀಸರು, ಹಲ್ಲುಕಿತ್ತ ಹಾವಿನಂತೆ ಅಸಹಾಯಕತೆ ಪ್ರದರ್ಶಿಸಿದರು. ಇದನ್ನೆಲ್ಲ ನೋಡಿದ ಪ್ರಾಣಕಂಟಕ ಕೊರೊನಾ ಸೋಂಕು ಒಳಗೊಳಗೆ ಕೇಕೆಹಾಕಿ ನಕ್ಕಿರಬೇಕು..!

Contact Your\'s Advertisement; 9902492681

ಕಠಿಣ ಲಾಕ್‌ಡೌನ್ ದಿನಗಳಲ್ಲಿ ತಿವ್ರ ಸಂಕಷ್ಟದ ದಿನಗಳನ್ನು ಅನುಭವಿಸಿದ ಸ್ಥಳೀಯರಿಗೆ ಈ ಬಾರಿ ಜಾರಿಯಾದ ಲಾಕ್‌ಡೌನ್ ಬಿಸಿ ಮುಟ್ಟಿಸುವಲ್ಲಿ ವಿಫಲಗೊಂಡಿತು. ವಾರದ ಸಂತೆ ರದ್ದುಪಡಿಸಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಪ್ರಚಾರ ಮಾಡಿದ್ದರೂ ಗುರುವಾರ ಭರ್ಜರಿ ಸಂತೆ ನಡೆಯಿತು. ಅಧಿಕಾರಿಗಳ ಆದೇಶವು ಗ್ರಾಮೀಣ ಭಾಗದ ತರಕಾರಿ ಬೆಳೆಗಾರರನ್ನು ಹಾಗೂ ಬಡ ವ್ಯಾಪಾರಿಗಳನ್ನು ಸಂತೆಯಿಂದ ಹೊರಗಿಟ್ಟು ಸ್ಥಳೀಯ ವ್ಯಾಪಾರಿಗಳಿಗೆ ಲಾಭ ತಂದುಕೊಟ್ಟಿತು.

ಒಬ್ಬ ಕಾರ್ಮಿಕನಿಗೆ ಸೋಂಕು ದೃಢಪಟ್ಟ ಎಸಿಸಿ ಕಾರ್ಮಿಕರ ಕಾಲೋನಿಯಲ್ಲಿ ಗುರುವಾರ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಸೋಂಕಿನ ಭಯವಿಲ್ಲದೆ ಕಾರ್ಮಿಕರು ಮುಗಿಬಿದ್ದು ತರಕಾರಿ ಖರೀಸಿದರು. ಮಾಸ್ಕ್ ಧರಿಸದೆ ಮತ್ತು ಪರಸ್ಪತ ಅಂತರ ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು, ಲಾಕ್‌ಡೌನ್ ಆದೇಶವನ್ನೇ ಅಣಕಿಸುವಂತೆ ಮಾಡಿತು. ಜನಜೀವನ ಸಹಜವಿದ್ದ ನಗರದಲ್ಲಿ ಲಾಕ್‌ಡೌನ್ ನಾಮಕೆವಾಸ್ತೆ ಎಂಬಂತಿದೆ ಎಂದು ಜನರೇ ಆಡಿಕೊಂಡು ಆಡಳಿತವನ್ನು ಟೀಕಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here