ಬಸವಣ್ಣನವರಿಗೆ ಸಂಬಂಧಿಸಿದ ಸ್ಮಾರಕಗಳು

0
172

ವಚನ ಸಾಹಿತ್ಯದ ನಾಯಕತ್ವ ವಹಿಸಿದ್ದ ಬಸವಣ್ಣನವರು ಸಾವಿರಾರು, ಲಕ್ಷಾವಧಿ ಜನರನ್ನು ಸಂಘಟಿಸಿ ಹೊಸ ಸಮಾಜ ಕಟ್ಟಲು ಶ್ರಮಿಸಿದ ಮಹಾನ್ ವ್ಕಕ್ತಿ. ಆದರೆ ಈ ಹಿಂದೆ ಬಸವಣ್ಣನವರು ಪುರಾಣ ಪುರುಷರೆ ಹೊರತು ಐತಿಹಾಸಿಕ ಪುರುಷನಲ್ಲ ಎಂಬ ಅನುಮಾನಪಡುವ ಕಾಲವೊಂದಿತ್ತು. ಈ ಅನುಮಾನಗಳೇ ಅದ್ಭುತ ಸಂಶೋಧನೆಗೆ ಕಾರಣವಾದವು. ಈ ಪ್ರಶ್ನೆಗಳ ಮೂಲಕ ಹಲವು ಉತ್ತರ ಕಂಡುಕೊಂಡರು ನಮ್ಮ ವಿದ್ವಾಂಸರು. ಅರ್ಜುನವಾಡ ಶಾಸನ ಸಿಕ್ಕ ನಂತರ ಬಸವಣ್ಣನವರ ಸುತ್ತ ಇದ್ದ ಸಂಶಯ ಪರಿಹಾರವಾಯಿತು.

“ಮಂಗಳಕೀರ್ತಿ ಪುರಾತಾನ ಜಂಗಮ ಲಿಂಗೈಕ್ಯ ಭಕ್ತಿ ನಿರ್ಭರ ಲೀಲಾ ಸಂಗಂ ಸಂಗತಿಯಂ ಮಾಳ್ಕೆ ಭಕ್ತಿಯೊಳನವರತಂ” ಎನ್ನುವ ಶಾಸನದ ಲಿಖಿತವು ಬಸವಣ್ಣನವರ ಬಗೆಗಿನ ಸಾದಾರ ಕಲ್ಪನೆ ಬಂತು. ಘಟ್ಟಿವಾಳಯ್ಯ, ಪಾಲ್ಕುರಿಕೆ ಸೋಮನಾಥ, ಭೀಮಕವಿ ಮುಂತಾದವರು ತಮ್ಮ ವಚನ ಹಾಗೂ ಬಸವ ಪುರಾಣಗಳಲ್ಲಿ ಮಂಡಿಗೆಯ ಮಾದಿರಾಜ ಪದವನ್ನು ಬಳಸುತ್ತಾರೆ. ಬಾಗೇವಾಡಿಗೆ ಬರುವುದಕ್ಕಿಂತ ಮೊದಲು ಈ ಮನೆತನ ಮಂಡಿಗೆ ಗ್ರಾಮಕ್ಕೆ ಸಂಬಂಧಿಸಿರಬಹುದು ಎಂಬುದನ್ನು ಡಾ. ಎಂ.ಎಂ. ಕಲ್ಬುರ್ಗಿಯವರು ಒಂದು ಸಂಶೋಧನಾತ್ಮಕ ಲೇಖನ ಬರೆದಿದ್ದರು. ಇದಕ್ಕೆ ಸಂಬಂಧಿಸಿದ ಮುದನೂರಿನ ಶಾಸನದ ಉಲ್ಲೇಖವನ್ನು ಕೂಡ ಅವರು ಪ್ರಸ್ತಾಪಿಸಿದ್ದರು. ಇದರ ಜಾಡು ಹಿಡಿದುಕೊಂಡು ಕ್ಷೇತ್ರಕಾರ್ಯಕ್ಕೆ ಹೋದಾಗ ೧೧೩೬ ಮಲ್ಲಾಬಾದ ಶಾಸನದ ಪ್ರಕಾರ ಯಳರಾಮೆ (ಯಡ್ರಾಮಿ), ಮಂಡಿಗೆ, ನಾಗನೂರ ಎಂಬ ಊರುಗಳು ಒಂದೇ ಸರಹದ್ದಿನಲ್ಲಿ ಇರುವ ಊರುಗಳು. ಮಾಡಗಿ, ಮಾರಡಗಿ ಊರು ಸಿಕ್ಕಿತು. ಇದಕ್ಕೆ ಈ ಹಿಂದೆ ಮಂಡಿಗೆ ಎಂದು ಕರೆಯಲಾಗುತ್ತಿತ್ತು ಎನ್ನುವುದು ಮಂಡಿಗೆಯ ಮಾದಿರಾಜನ ಮಗ ಎಂಬುದಕ್ಕೆ ಸಾಕ್ಷಾಧಾರಗಳು ದೊರೆತವು.

Contact Your\'s Advertisement; 9902492681

ಮಂಡಿಗೆ ಗ್ರಾಮದಲ್ಲಿ ಬಸವಣ್ಣವರ ಗುಡಿಯಿದ್ದು, ಗುಡಿಯೊಳಗೆ ಡಮರುಗ ಹಿಡಿದ ಶಿವನ ಶಿಲ್ಪ ಇದೆ. ಪ್ರಾಚೀನ ಶಿಲ್ಪ ಫಲಕಗಳಿವೆ. ಗುಡಿಯ ಹಿಂದುಗಡೆ ವೀರಗಲ್ಲು ಇದೆ. ಅದರ ಕೆಳಗಡೆ ಗವಿ, ಹಳೆಯ ಈಶ್ವರನ ಗುಡಿ, ಸುತ್ತಲೂ ಶೈವ ಸಂಪ್ರದಾಯಕ್ಕೆ ಸೇರಿದ ಒಂದಿಷ್ಟು ಕುರುಹುಗಳು ಕೂಡ ಸಿಗುತ್ತವೆ. ಊರ ಪ್ರವೇಶಕ್ಕೆ ಮುನ್ನ ವೀರಭದ್ರೇಶ್ವರನ ಗುಡಿ, ಕಾಡುಗಲ್ಲುಗಳೆಲ್ಲವೂ ೧೦-೧೧ನೇ ಶತಮಾನಕ್ಕೆ ಸೇರಿದ ಪ್ರಾಚೀನ ಸಾಕ್ಷಿಗಳಾಗಿ ದೊರೆಯುತ್ತವೆ. ಇಲ್ಲಿಗೆ ಸಮೀಪದ ನೀರಡಗಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಇದೆ. ಇದು ಬಸವಣ್ಣನವ ಪೂರ್ವಜರಿಗೆ ಸಂಬಂಧಿಸಿದ್ದು ಎಂದು ಸಂಶೋಧನೆಯಿಂದ ಖಾತ್ರಿ ಪಡಿಸಿಕೊಳ್ಳಬಹುದು.

ಇಂಗಳೇಶ್ವರ (ತಿಂಗಳೇಶ್ವರ) ಊರಿನ ಕಲ್ಲಿನಾಥ ದೇವಾಲಾಯದ ಎದುರಿಗೆ ಬಹು ದೊಡ್ಡ ಬೆಟ್ಟವಿದೆ. ಚನ್ನಬಸವಣ್ಣನ ಗುಡಿಯ ಜೊತೆಗೆ ಅಕ್ಕನಾಗಮ್ಮನ ಗವಿ ಕೂಡ ಇದೆ. ಇತ್ತೀಚೆಗೆ ನಿರ್ಮಾಣವಾದ ರೇವಣಸಿದ್ಧೇಶ್ವರ ಗುಡಿ, ಮುಗ್ಧ ಸಂಗಯ್ಯನ ಗವಿ ಕೂಡ ಇದೆ. ಅಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಅಕ್ಕನಾಗಮ್ಮ, ಬಸವಣ್ಣ ಓಡಾಡಿದ್ದಾರೆ ಎಂದು ಈಗೀಗ ಅಲ್ಲಿನ ಜನ ಹೆಮ್ಮೆಯಿಂದ ಹೇಳುತ್ತಾರೆ. ಮಾದಲಾಂಬೆಯ ಸಹೋದರ ಕಟ್ಟಿದ ನೀಲಕಂಠೇಶ್ವರ ದೇವಾಲಯ ಕೂಡ ಇದೆ. ಪುರಾಣಕತೆಗೆ ಸಂಬಂಧಿಸಿದ ಹಾಲಬಾವಿ, ಬಸವನ ಬಾವಿ ಕೂಡ ಇದೆ.

ಬಾಗೇವಾಡಿಯಲ್ಲಿ ಸಂಗಮೇಶ್ವರ ದೇವಾಲಯ (ಈಗಿನ ಬಸವೇಶ್ವರ ದೇವಾಲಯ), ಶಿವ ದೇವಾಲಯ, ಚೆನ್ನಮ್ಮನ ಅರಮನೆ, ಕುದುರೆ ಕಟ್ಟುವ ಮನೆಯ ಸ್ಥಳ, ಮಲ್ಲಯ್ಯನ ಕಂಬಿ ಪೂಜೆ ಇರುವ ಮನೆಯ ಜಗಲಿ, ಬಸವಣ್ಣನವರ ಮನೆಯವರು ಪೂಜೆಗಾಗಿ ಬಳಸುತ್ತಿದ್ದ ನೀರಿನ ಬಾವಿ, ಹೋರಿ ಮಟ್ಟಿ ಗುಡ್ಡ (ಮಾದರಸ-ಮಾದಲಾಂಬಿಕೆಯವರ ತೋಟ) ಇವೆಲ್ಲವುಗಳನ್ನು ಕಾಣಬಹುದು.

ಕೂಡಲಸಂಗಮ ಬಳಿ ಇರುವ ಬೆಳಗಲ್ಲು ಊರಿನ ಹಾಸು ಬಂಡೆಯಲ್ಲಿ ಕೂಡಲಸಂಗಮದಲ್ಲಿರುವ ಸಂಗಮೇಶ್ವರ ದೇವಾಲಯದ ನೀಲನಕ್ಷೆ ಇರುವುದನ್ನು ಕಾಣಬಹುದು. ಇಲ್ಲಿಂದ ದೇವಾಲಯ ಕಟ್ಟಡಕ್ಕೆ ಬೇಕಾದ ಕಲ್ಲುಗಳನ್ನು ಕಟೆದು ಕಳಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂಗಮೇಶ್ವರ ದೇವಸ್ಥಾನದಲ್ಲಿ ಅಲ್ಲಮಪ್ರಭುಗಳ ಮೂರ್ತಿ ಇರುವುದನ್ನು ಕಾಣಬಹುದು. ಬಸವಣ್ಣನವರ ಐಕ್ಯಸ್ಥಳವೂ ಇದೆ.

ಶರಣರು ಕುಂತು-ನಿಂತು ಹೋದ ಸ್ಥಳಗಳೇ ಸ್ಮಾರಕಗಳಾಗಿವೆ. ಪುರಾಣ, ಪ್ರವಚನದ ಜೊತೆಗೆ ಅಳಿದುಳಿದ ಸ್ಮಾರಕಗಳೂ ಸಹ ಶರಣರ ಕುರಿತಾದ ಜೀವನೇತಿಹಾಸಕ್ಕೆ ಸಾಕ್ಷಿಗಳನ್ನಾಗಿ ಬಳಸಿಕೊಳ್ಳಬಹುದು ಎಂಬುದು ಈ ಕ್ಷೇತ್ರಕಾರ್ಯದಿಂದ ವಿಧಿತವಾಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here