ವಾಡಿ: ಕೋರೊನಾ ವೈರಸ್ ತಡೆಗಟ್ಟು ಉದ್ದೇಶದಿಂದ ಈ ಬಾರಿ ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ಆಚರಣೆ ವೇಳೆ ಈದ್ಗಾ ಮೈದಾನಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದ್ದು, ಮುಸ್ಲಿಂ ಬಂಧುಗಳು ಸಹಕರಿಸಬೇಕು ಎಂದು ಸಿಪಿಐ ಕೃಷ್ಣಪ್ಪ ಕಲ್ಲದೇವರು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡಿದರು.
ಬಕ್ರೀದ್ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಬಲಿ ನೀಡುವುದು ಬಕ್ರೀದ್ ಹಬ್ಬದ ಸಾಂಪ್ರದಾಯಿಕ ಆಚರಣೆಯಾಗಿದ್ದರಿಂದ ಕುರಿ ಮತ್ತು ಕೋಳಿಗಳನ್ನು ಬಲಿ ಕೊಡಲು ಅಭ್ಯಂತರವಿಲ್ಲ. ಆದರೆ ಹಸು, ಎತ್ತು, ಎಮ್ಮೆ ಹಾಗೂ ಒಂಟೆಗಳನ್ನು ಹಬ್ಬದ ಹೆಸರಿನಲ್ಲಿ ಬಲಿ ಕೊಡುವಂತಿಲ್ಲ. ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮೇಲೆ ನಿಗಾವಹಿಸಲು ಎಲ್ಲೆಡೆ ಚಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಕೃಷಿಗೆ ಸಂಬಂದಿಸಿದ ಜಾನುವಾರು ಸಾಗಾಣಿಕೆದಾರರು ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ಪತ್ರ ಪಡೆದಿರಬೇಕು. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಹರಡದಂತೆ ತಡೆಯಲು ಹಬ್ಬದ ದಿನದಂದು ಈದ್ಗಾ ಮೈದಾನಗಳಲ್ಲಿ ನಮಾಜ್ ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದಯಕೊಂಡು ನಿರ್ಧಿಷ್ಟ ಸಂಖ್ಯೆಯಲ್ಲಿ ಪಾಲ್ಗೊಂಡು ಪರಸ್ಪರ ಆರು ಅಡಿ ಅಂತರವಿಟ್ಟು ನಮಾಜ್ ಮಾಡಬಹುದು.
ಹೊರಗಿನಿಂದ ಬಂದವರು ಮಸೀದಿಯೊಳಗಿನ ಧರ್ಮ ಗ್ರಂಥಗಳನ್ನು ಯಾವೂದೇ ಕಾರಣಕ್ಕೂ ಮುಟ್ಟಬಾರದು. ೬೦ ವಯೋಮಾನದ ವೃದ್ಧರು ಮತ್ತು ೧೦ ವರ್ಷದೊಳಗಿನ ಮಕ್ಕಳು ನಮಾಜ್ ಮಾಡಲು ಮಸೀದಿಗೆ ಬರುವಂತಿಲ್ಲ. ಖಾಸಗಿ ಸ್ಥಳಗಳಲ್ಲೂ ನಮಾಜ್ ನಡೆಸುವಂತಿಲ್ಲ. ಪರಸ್ಪರ ಹಸ್ತಲಾಘವ ಮತ್ತು ಅಲಿಂಗನ ಮಾಡಕೂಡದು. ನಮಾಜ್ ಪೂರ್ವ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಚವಾಗಿ ಕೈತೊಳೆದುಕೊಳ್ಳುವ ಮೂಲಕ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿ ಕೋಮು ಸೌಹಾರ್ಧತೆಯಿಂದ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ವಿಜಯಕುಮಾರ ಭಾವಗಿ ಮಾತನಾಡಿ, ಪರವಾನಿಗೆ ಹೊಂದಿದ ಗೋವುಗಳ ಸಾಗಾಣಿಕೆಯನ್ನು ಯಾರಾದರೂ ತಡೆದರೆ ತಕ್ಷಣಕ್ಕೆ ಉದ್ರಿಕ್ತಗೊಂಡು ಕಾನೂನು ಕೈಗೆತ್ತಿಕೊಳ್ಳಬೇಡಿ. ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು. ನಾವು ದಾಖಲೆಗಳನ್ನು ಪರಿಸೀಲಿಸುತ್ತೇವೆ. ಗೋವು ಸಾಗಾಣಿಕೆ ಅಧಿಕೃತವಾಗಿದ್ದರೆ ಬಿಡುಗಡೆಗೊಳಿಸುತ್ತೇವೆ. ಗೋವುಗಳ ಸಾಗಾಣಿಕೆ ಹೆಸರಲ್ಲಿ ಯಾರಾದರೂ ಸಮಾಜದಲ್ಲಿ ಅಶಾಂತ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಗುವುದು. ಕಾನೂನು ಪಾಲಿಸಿದರೆ ಮಾತ್ರ ನಾವು ನೀವು ಸ್ನೇಹಿತರು. ಕಾನೂನು ಕೈಗೆತ್ತಿಕೊಂಡರೆ ನಾವು ಪೊಲೀಸರು, ನೀವು ಅಪರಾಧಿಗಳಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಮುಸ್ಲಿಂ ಸಮಾಜದ ಮುಖಂಡರಾದ ಫೆರೋಜ್ ಖಾನ್, ಬಾಬುಮಿಯ್ಯಾ, ಶಿಕ್ಷಕ ಶೇಖ ಅನ್ವರ್, ಭಾಯ್ ಭಾಯ್ ಗ್ರೂಪ್ ಮುಖಂಡ ಶಮಶೀರ್ ಅಹ್ಮದ್ ಮಾತನಾಡಿದರು. ಪುರಸಭೆ ಸದಸ್ಯ ಮಹ್ಮದ್ ಗೌಸ್, ಯುವ ಮುಖಂಡರಾದ ದಾವೂದ್ ಪಟೇಲ, ಮಹ್ಮದ್ ಅಶ್ರಫ್, ಭಶೀರ್ ಖುರೇಶಿ, ರಾಜಾ ಪಟೇಲ, ಚಾಂದ್‌ಮಿಯ್ಯಾ, ನಾಸೀರ್ ಹುಸೇನ ಪಾಲ್ಗೊಂಡಿದ್ದರು. ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ ವಂದಿಸಿದರು.