ಶಹಾಬಾದ:ಕೋವಿಡ್-19 ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ಕೊರೊನಾ ಸೊಂಕಿಗೆ ಬಲಿಯಾಗಿರುವ ಮರತೂರ ಗ್ರಾಪಂ ಪಿಡಿಓ ದಿ.ಗುರುನಾಥ ಓಗೆ ಅವರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶನ್ವಯ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಈರಣ್ಣ ಕೆಂಭಾವಿ, ಕೊರೊನಾ ಕೆಲಸದಲ್ಲಿ ನಿರತರಾಗಿದ್ದ ಮರತೂರ ಗ್ರಾಪಂ ಪಿಡಿಓ ಗುರುನಾಥ ಓಗೆಯವರು ಕೊರೊನಾಗೆ ಬಲಿಯಾಗಿದ್ದಾರೆ. ಆದ್ದರಿಂದ ಇವರ ಕುಟುಂಬಕ್ಕೆ ಕೇಂದ್ರ ಸರ್ಕಾರದ ಆದೇಶದಂತೆ 50 ಲಕ್ಷ ರೂ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಅಡಿಯಲ್ಲಿ ನೌಕರಿ ನೀಡಬೇಕು. ಕೋವಿಡ್-19ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರಕಾರಿ ನೌಕರರಿಗೆ ತಪಾಸಣೆಗೋಸ್ಕರ್ ಪ್ರತ್ಯೇಕವಾದ ಆಸ್ಪತ್ರೆ ಒದಗಿಸಬೇಕು. ನಿವೃತ್ತಿ ಅಂಚಿನಲ್ಲಿರುವ 55 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಹೊಂದಿರುವ ನೌಕರರಿಗೆ ಹಾಗೂ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.
ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕಾಂತ ಭರಣಿ, ಖಜಾಂಚಿ ರಮೇಶ ಕುಲಕರ್ಣಿ, ಗೌರವಾಧ್ಯಕ್ಷ ಸಂತೋಷ ಸಲಗರ, ಮಹಮ್ಮದ್ ಖಾದ್ರಿ, ಮೋಹನ ಗಾಯಕವಾಡ,ಹೆಚ್.ವಾಯ್.ರಡ್ಡೇರ್, ಶಾಂತಮಲ್ಲಪ್ಪ ಶಿವಭೋ ಇತರರು ಇದ್ದರು.