ಶಹಾಬಾದ:ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಮನೆಯಲ್ಲೇ ಕೆಲಸ ನೀಡಿದ್ದಾರೆ. ಕೊರೊನಾ ಭಯದಲ್ಲಿ ಮನೆಯಿಂದ ಹೊರಗಡೆ ಬರದೇ ಅದೆಷ್ಟೋ ಜನ ಮನೆಯಲ್ಲಿದ್ದಾರೆ.ಆದರೆ ಇಲ್ಲೊಬ್ಬ ಶಿಕ್ಷಕ ಮನೆಗೆಲಸ ಮುಗಿಸಿ, ಮಕ್ಕಳ ಕಲಿಕೆಗೆ ತಡೆಯಾಗಬಾರದೆಂಬ ಕಾರಣಕ್ಕೆ ಸುತ್ತಮುತ್ತಲಿನ ಪ್ರದೇಶದ ತಮ್ಮ ಶಾಲಾ ಮಕ್ಕಳಲ್ಲದೇ ಸರ್ಕಾರಿ ಶಾಲೆಯ ಮಕ್ಕಳ ಮನೆಮನೆಗೆ ಹೋಗಿ ಕೊರೊನಾ ಜಾಗೃತಿ ಹಾಗೂ ಓದಲು ಹುರಿದುಂಬಿಸುತ್ತಿರುವ ಪರಿ ಮಾತ್ರ ಮಾದರಿಯಾಗಿದೆ.
ಹೌದು.ಇಂತಹ ವಿಶೇಷ ರೂಪದ ಚಟುವಟಿಕೆಯನ್ನು ಇಲ್ಲಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢಶಾಲೆಯ ಶಿಕ್ಷಕ ಸಿದ್ಧಲಿಂಗ ಬಾಳಿಯವರು ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಕೊಟ್ಟಂತಹ ಮನೆಗೆಲಸ ( ವರ್ಕ್ ಫ್ರಮ್ ಹೋಮ್) ಕೆಲಸವನ್ನು ಮಾಡಿ, ತಾವಾಯಿತು ತಮ್ಮ ಮನೆಯಾಯಿತು ಎಂದುಕೊಂಡಿರುವವರ ಮಧ್ಯೆ ತಮ್ಮ ಶಾಲೆಯಲ್ಲದೇ ಪಕ್ಕದ ಸರ್ಕಾರಿಶಾಲೆಯಲ್ಲಿ ಓದುತ್ತಿರುವ ಮಕ್ಕಳ ಮನೆಮನೆಗೆ ಬೇಟಿ ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಅದಕ್ಕಾಗಿ ಸುತ್ತಮುತ್ತಲಿನ ರಾವೂರ,ಮಾಲಗತ್ತಿ,ಲಕ್ಷ್ಮಿಪೂರ ವಾಡಿ ಹಾಗೂ ವಾಡಿ ಪಟ್ಟದಲ್ಲಿರುವ ತಮ್ಮ ಶಾಲೆಯ ಹಾಗೂ ಸರ್ಕಾರಿ ಶಾಲೆಯ ಮಕ್ಕಳ ಮನೆಯನ್ನು ಹುಡುಕಿಕೊಂಡು ಹೋಗಿ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇತುಬಂಧ ತರಗತಿಗಳನ್ನು ಮಕ್ಕಳು ವೀಕ್ಷಕಿಸಲು ಮತ್ತು ವೀಕ್ಷಿಸಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಲು ಪಾಲಕರಿಗೆ ಕರೆ ಮಾಡಿ ತಿಳಿದುಕೊಳ್ಳುತ್ತಿದ್ದಾರೆ. ಸಮಾಜ ವಿಜ್ಞಾನ ವಿಷಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ.
ಈ ರೀತಿಯ ಸದಾ ಕ್ರೀಯಾಶೀಲ ಚಟುವಟಿಕೆಯಿಂದ ಹೆಸರುವಾಸಿಯಾಗಿರುವ ಸಿದ್ಧಲಿಂಗ ಬಾಳಿಯವರು ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯ ಪೂರ್ವದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿಗಳ ಜತೆಗೆ ಹೋಗಿ ಮಕ್ಕಳಿಗೆ ಓದುವಂತೆ ಹೇಳಿ, ಮನೋಬಲವನ್ನು ಹೆಚ್ಚಿಸುವ ಕೆಲಸ ಮಾಡಿದ್ದರು.ಅಲ್ಲದೇ ಆನ್ ಲೈನ್ ತರಗತಿ ನಡೆದಾಗಲೂ ಪ್ರತಿ ಮಕ್ಕಳ ಮನೆಗೆ ಹೋಗಿ ತರಗತಿಗಳನ್ನು ನೋಡುವಂತೆ ಮಕ್ಕಳಿಗೆ ಹೇಳಿದರಲ್ಲದೇ ಪಾಲಕರಿಗೆ ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ನೀಡಲು ಸಹಕರಿಸಬೇಕೆಂದು ಮನವಿ ಮಾಡಿದ್ದರು.ಕೊರೊನಾ ಸಂಕಷ್ಟದ ಸಮಯದಲ್ಲಿ ಮಕ್ಕಳು ಶಾಲೆಯಿಂದ ಎರಡು ತಿಂಗಳು ದೂರವಾಗಿದ್ದಾರೆ. ಶಾಲಾ ಮಕ್ಕಳ ಕಲಿಕೆಗೆ ತಡೆಯಾಗಬಾರದು.ಮಕ್ಕಳು ಕಲಿಕೆಯಿಲ್ಲದೇ ಕಾಲಹರಣ ಮಾಡಬಾರದು ಎಂಬ ಕಾರಣಕ್ಕಾಗಿ ಅವರಲ್ಲಿ ಕಲಿಕೆ ನಿರಂತರವಾಗಿರಬೇಕು.ಪೂರ್ವ ಜ್ಞಾನ ಕಳೆದುಕೊಳ್ಳದೇ ಕಲಿಕೆಯಲ್ಲಿ ಮುಂದುವರಿಯುವಂತೆ ಮಾಡಬೇಕೆಂದುದೇ ಅವರ ಸುದ್ದುದೇಶವಾಗಿದೆ.ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಮಾಜದ ಕೊಂಡಿಯಂತೆ ಕೆಲಸ ಮಾಡುತ್ತಿರುವ ಸಿದ್ಧಲಿಂಗ ಬಾಳಿಯವರು ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.ಅಲ್ಲದೇ ಪಾಲಕ ವರ್ಗದವರಿಂದ ಸೈ ಎನಿಸಿಕೊಂಡಿದ್ದಾರೆ. ಇಂತಹ ಶಿಕ್ಷಕರು ಹೆಚ್ಚಾಗಬೇಕು. ಇದರಿಂದ ಸರ್ಕಾರದ ಶೈಕ್ಷಣಿಕ ಯೋಜನೆಗಳು ಪ್ರತಿ ಮಗುವಿಗೆ ಮುಟ್ಟಲು ಸಹಕಾರಿಯಾಗುತ್ತದೆ ಎಂಬುದೇ ಎಲ್ಲರ ಆಶಯವಾಗಿದೆ.
ಕರೊನಾದಂತ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ತೊಡಕಾಗಬರದು.ನಿರಂತರ ಕಲಿಕಾ ಪ್ರಕ್ರಿಯೆಗೆ ಒಳಪಡಿಸುವ ಉದ್ದೇಶದಿಂದ ಮನೆಮನೆಗೆ ಬೇಟಿ ನೀಡಿದ್ದೆನೆ.ಇದಕ್ಕೆ ಮಾಜಿ ಗ್ರಾಪಂ ಸದಸ್ಯರಾದ ಹಣಮಂತ ಹೊನ್ನಗೇರಿ ,ವೆಂಕಟೇಶ ಅಚ್ಚೋಲಿ ಅವರು ಸಾಥ್ ನೀಡಿದ್ದಾರೆ.ಅಲ್ಲದೇಎಲ್ಲಾ ಮಕ್ಕಳ ವಾಟ್ಸ ಅಪ್ ಗ್ರೂಪ್ ಮಾಡಿ ಪಾಠಗಳನ್ನು ಪ್ರತಿ ಮಗುವಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೆನೆ-ಸಿದ್ಧಲಿಂಗ ಬಾಳಿ ಶಿಕ್ಷಕ.
ಕರೊನಾ ಹರಡುತ್ತಿರುವ ಸಂದರ್ಭದಲ್ಲಿ ಪಾಕರು ಆತಂಕದಲ್ಲಿದ್ದಾರೆ.ಅದರ ಮಧ್ಯೆ ಮಕ್ಕಳಿಗೆ ಶಾಲೆಯಿಲ್ಲದ ಪರಿಣಾಮ ಓದಲು ಕೂಡುತ್ತಿಲ್ಲ.ಆದರೆ ಬಾಳಿ ಶಿಕ್ಷಕರು ಮನೆಗೆ ಬೇಟಿ ನೀಡಿ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಬರುವ ತರಗತಿಗಳನ್ನು ನೋಡಲು ಹೇಳಿದ್ದಾರೆ. ಮಕ್ಕಳು ಕಲಿಕೆಯಲ್ಲಿ ಮುಂದುವರೆಯದಿದ್ದಲ್ಲಿ ನನಗೆ ತಿಳಿಸಿ ಎಂದು ಮೊಬೈಲ್ ನಂಬರ್ ನೀಡಿದ್ದಾರೆ.ಇದರಿಂದ ಮಕ್ಕಳು ಕಲಿಕೆಯಲ್ಲಿ ಮುಂದುವರಿಯುತ್ತಿದ್ದಾರೆ- ಮಲ್ಲಿಕಾರ್ಜುನ್ ಇಟಗಿ ಸದಸ್ಯರು ಗ್ರಾಪಂ ಮಾಲಗತ್ತಿ.