ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಹರಡುವಿಕೆಯನ್ನು ತಡೆಗಟ್ಟಲು ಅನುಕೂಲವಾಗುವಂತೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ 2020ರ ಆಗಸ್ಟ್ 3ರಂದು ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಶರತ್ ಬಿ. ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 3 ರಂದು ಸೋಮವಾರ ಶ್ರಾವಣ ಮಾಸದ ಹುಣ್ಣಿಮೆ ಇದ್ದು, ಈ ದೇವಾಲಯಕ್ಕೆ ಪ್ರತಿ ಹುಣ್ಣಿಗೆಯಂದು ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವರು.
ಈ ದೇವಾಲಯಕ್ಕೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ಭಕ್ತರನ್ನು ನಿಯಂತ್ರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಷ್ಟಕರವಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯ ಸಂಹಿತೆ 1973 ರ ಕಲಂ 144 ರನ್ವಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.