ಸುರಪುರ: ನಗರದ ತಹಸೀಲ್ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರ ಜನ್ಮ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಡಿ.ದೇವರಾಜ ಅರಸ್ ಅವರ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.
ನಂತರ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮಾತನಾಡಿ,ಡಿ.ದೇವರಾಜ್ ಅರಸ್ ಅವರು ಈ ನಾಡು ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.ನಾಡಿನ ಅಭಿವೃಧ್ಧಿಗೆ ಅರಸು ಅವರ ಕೊಡುಗೆ ಅಮೂಲ್ಯವಾಗಿದೆ.ಮೈಸೂರು ಸರ್ಕಾರ ನಂತರದಲ್ಲಿ ಈ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದವರು ಅರಸು ಅವರು.ಅಲ್ಲದೆ ಉಳುವವನೆ ಭೂ ಒಡೆಯ ಎಂಬ ಕಾನೂನನ್ನು ಜಾರಿಗೆ ತರುವ ಮೂಲಕ ನಾಡಿನ ಬಡ ಜನರ ಏಳಿಗೆಗೆ ಕೊಡುಗೆ ನೀಡಿದ್ದಾರೆ.
ಅಲ್ಲದೆ ಜೀತ ಪದ್ಧತಿ ಮತ್ತು ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಮೂಲಕ ಸಮಾಜದಲ್ಲಿನ ಮೇಲು ಕೀಳುಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಿದ ಮಹಾನ್ ವ್ಯಕ್ತಿ ಡಿ.ದೇವರಾಜ್ ಅರಸ್.ಅಂತಹ ಮಹಾನಿಯರ ಜಯಂತಿಯನ್ನು ಇಂದು ನಾವೆಲ್ಲ ಆಚರಿಸುವ ಮೂಲಕ ಅವರನ್ನು ಸ್ಮರಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನಿಂಗರಾಜ ಬಾಚಿಮಟ್ಟಿ ರಮೇಶ ದೊರೆ ಆಲ್ದಾಳ ಹಣಮಂತ್ರಾಯ ಮಕಾಶಿ ಹಾಗು ತಹಸೀಲ್ ಸಿರಸ್ತೆದಾರ ಕೊಂಡಲನಾಯಕ ಸೋಮನಾಥ ನಾಯಕ ಸೋಮಶೇಖರ ಪತ್ತಾರ ಹಿಂದುಳಿದ ವರ್ಗಗಳ ಅಧಿಕಾರಿ ಬಾಬು ಮಹಾದೇವಿ ಭೀಮು ಯಾದವ್ ಸೇರಿದಂತೆ ಅನೇಕರಿದ್ದರು.