ಬಸವ ಸಮಿತಿ ವತಿಯಿಂದ ನುಡಿ ನಮನ

0
224

ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪದಲ್ಲಿ ಡಾ. ಎಸ್.ಆರ್. ಗುಂಜಾಳ್ ಅವರು ಪ್ರಾಯೋಜಿಸಿದ ‘ಶರಣರ ಸ್ಮರಣಾರ್ಥ’ ದತ್ತಿ ಅನುಭಾವÀ ಮತ್ತು ನಾಡೋಜ ಎಂ.ಎಂ. ಕಲಬುರಗಿಯವರ ಐದನೆಯ ‘ಪುಣ್ಯಸ್ಮರಣೆ’ ಹಾಗೂ ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಡಾ. ಈಶ್ವರಯ್ಯ ಮಠ ಅವರಿಗೆ ‘ನುಡಿನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೊದಲಿಗೆ, ಡಾ. ಈಶ್ವರಯ್ಯ ಮಠ ಅವರ ಜೀವನ ಸಾಧನೆ ಸ್ಮರಿಸಿ ನುಡಿ ನಮನ ಸಲ್ಲಿಸಿದರು. ಡಾ. ಈಶ್ವರಯ್ಯ ಮಠ ಅವರು ಸಗರ ನಾಡಿನ ದೇವರಗೋನಾಲದಲ್ಲಿ ಜನಿಸಿದವರು. ಸಿದ್ರಾಮಯ್ಯ ಹಿರೇಮಠ ಮತ್ತು ಅಕ್ಕನಾಗಮ್ಮನವರ ಪುತ್ರರಾಗಿ ಜನಿಸಿದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ ಪೂರೈಸಿದರು. ನಂತರ ಪ್ರೌಢಶಾಲೆಯಿಂದ ಪದವಿವರೆಗೆ ಸುರಪುರದಲ್ಲಿ ಓದಿದರು. ಅದಾದ ಮೇಲೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ; ಎಂ.ಫಿಲ್; ಪಿಎಚ್.ಡಿ. ಮುಗಿಸಿದರು.

Contact Your\'s Advertisement; 9902492681

ಕಡಕೋಳ ಮಡಿವಾಳಪ್ಪನವರ ಸ್ವರವಚನಗಳು ಕುರಿತು ಮತ್ತು ಸ್ವರವಚನ ಸಾಹಿತ್ಯ ಕುರಿತು ಪ್ರೌಢ ಸಂಶೋಧನೆ ಕೈಗೊಂಡರು. ವಿದ್ಯಾರ್ಥಿ ಜೀವನದಲ್ಲಿ ಪ್ರಭು ಕಾಲೇಜಿನ ಪಾಚಾರ್ಯರಾಗಿದ್ದ ಪ್ರಿ. ಕೆ. ವಿಶ್ವನಾಥ ಅವರ ಪ್ರೇರಣೆಯಿಂದ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡರು. ಡಾ. ವಿ.ಜಿ. ಪೂಜಾರ, ಬಿ. ಮಹಾದೇವಪ್ಪ ಮತ್ತು ಪ್ರಿ. ಶಿವಶರಣ ಪಾಟೀಲ ಜಾವಳಿಯವರ ಮಾರ್ಗದರ್ಶನದಲ್ಲಿ ವಚನ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯದ ಬಗೆಗೆ ಒಲವು ಬೆಳೆಸಿಕೊಂಡರು. ಡಾ. ಎಂ.ಜಿ. ಬಿರಾದಾರ ಮತ್ತು ಪ್ರೊ. ಎಸ್.ಎಸ್. ಆಲಗೂರ ಅವರ ಪ್ರೋತ್ಸಾಹದಿಂದ ವೈಚಾರಿಕತೆಯನ್ನು ರೂಢಿಸಿಕೊಂಡರು ಎಂದು ತಿಳಿಸಿದರು.

ಡಾ. ಈಶ್ವರಯ್ಯ ಮಠ ಅವರು ಸ್ವತಂತ್ರವಾಗಿ 07 ಕೃತಿಗಳನ್ನು ರಚಿಸಿದ್ದರು. 20 ಕೃತಿಗಳನ್ನು ಸಂಪಾದನೆ ಮಾಡಿದ್ದರು ಮತ್ತು ಗುಲಬರ್ಗಾವಿ.ವಿ. ಮತ್ತು ಮಹಿಳಾ ವಿಶ್ವವಿದ್ಯಾಲಯಗಳ ಪಠ್ಯಗಳನ್ನಾಗಿ 04 ಕೃತಿಗಳನ್ನು ಹೊರತಂದಿದ್ದರು. ಒಂದು ಕೃತಿಯನ್ನು ತೆಲುಗಿವಿನಿಂದ ಭಾಷಾಂತರಿಸಿದ್ದರು. ವಿದ್ಯಾರ್ಥಿಗಳು, ಸಮಾನ ಮನಸ್ಕ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಅವರು ಆಪತ್ಬಾಂಧವರಾಗಿದ್ದರು. ನಿರಂತರ ಅಧ್ಯಯನ, ಅಧ್ಯಾಪನ, ಸಂಶೋಧನೆಗೆ ತಮ್ಮನ್ನು ತಾವು ಸಮರ್ಪಿಸಿ ಕೊಂಡಿದ್ದರು.

ಉತ್ತರ ಕರ್ನಾಟಕದಲ್ಲಿಯೇ ಪ್ರತಿಭಾನ್ವಿತ ಕನ್ನಡ ಪ್ರಾಧ್ಯಾಪಕರು ಮತ್ತು ಜನಪ್ರಿಯ ವಾಗ್ಮಿಗಳಾಗಿ ಪ್ರಸಿದ್ಧರಾಗಿದ್ದರು. ಅವರು ತಮ್ಮ ವೈಚಾರಿಕತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯಕ್ತಿತ್ವದಿಂದ ನಾಡಿನಾದ್ಯಂತ ಹೆಸರಾಗಿದ್ದರು. ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಸ್ಥಳೀಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕಸ್ಮಿಕವಾಗಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಬದುಕಿನ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದರು. ಜೊತೆಗೆ ಅವರ ನಿಷ್ಕಲ್ಮಷ ಸ್ವಭಾವ, ಸಕಾರಾತ್ಮಕ ಚಿಂತನೆ, ಸ್ನೇಹಪರ ಗುಣಗಳನ್ನು ನೆನೆದು ಕಣ್ತುಂಬಿಕೊಂಡು ಭಾವುಕರಾಗಿ ನುಡಿನಮನ ಸಲ್ಲಿಸಿದರು.

ಡಾ. ಕಲ್ಯಾಣರಾವ ಪಾಟೀಲ ಅವರು ಮಾತನಾಡುತ್ತ ನಾಡೋಜ ಎಂ.ಎಂ. ಕಲಬುರಗಿಯವರ ಐದನೆಯ ಪುಣ್ಯ ಸ್ಮರಣೆಯ ನಿಮಿತ್ಯ ಅವರ ಬದುಕು-ಬರಹ, ಅವರ ಸಾಹಿತ್ಯಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಸಾಧನೆಯ ಮೈಲಿಗಲ್ಲುಗಳನ್ನು ಎಳೆಎಳೆಯಾಗಿ ಬಿಡಿಸಿ ತಿಳಿಸಿದರು. ಡಾ. ಕಲಬುರ್ಗಿಯವರ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳ ವಿಸ್ತøತ ವ್ಯಾಪ್ತಿಯನ್ನು ಪರಿಚಯ ಮಾಡಿಕೊಟ್ಟರು. ಜೊತೆಗೆ ಅವರ ಕೊನೆಯ ಆಶಯವಾಗಿದ್ದ ಲಿಂಗಾಯತ ಸಮಾಜದ ಶುದ್ಧೀಕರಣ, ನವೀಕರಣ, ಏಕೀಕರಣ, ಸಬಲೀಕರಣ, ಜಾಗರೀಕರಣಗಳ ವಿಚಾರಗಳನ್ನು ಪ್ರಸ್ತಾಪಿಸಿದರು.

ದತ್ತಿ ಅನುಭಾವ ವಿಷಯವಾದ ‘ವಚನಗಳಲ್ಲಿ ಪರಿಸರ ಪ್ರಜ್ಞೆ’ ಕುರಿತು ಮಾತನಾಡುತ್ತ ಸೃಷ್ಟಿ, ಸೌರವ್ಯೂಹ, ಭೂಗ್ರಹ, ಸಕಲ ಜೀವರಾಶಿ ಮತ್ತು ಮನುಷ್ಯನ ಜೀವಿತಾವಧಿಯಲ್ಲಿ ಪ್ರಕೃತಿಯ ಪಾತ್ರ ಎಷ್ಟು ಮಹತ್ವ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಬಸವಾದಿ ಶಿವಶರಣರು ತಮ್ಮ ವಚನಗಳಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಪ್ರತಿಪಾದಿಸಿದ ವಿಚಾರಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಅದರಲ್ಲಿಯೂ ವಿಶೇಷವಾಗಿ ಜೇಡರ ದಾಸಿಮಯ್ಯ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರ ವಚನಗಳಲ್ಲಿ ಹುದುಗಿರುವ ಪರಿಸರ ಪ್ರಜ್ಞೆ ಕುರಿತು ಉಲ್ಲೇಖಗಳೊಂದಿಗೆ ಸವಿಸ್ತಾರವಾಗಿ ವಿಶ್ಲೇಷಿಸಿದರು.

ಕಲಬುರ್ಗಿ ಬಸವ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಚ್.ಕೆ. ಉದ್ದಂಡಯ್ಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಶರಣು ಸಮರ್ಪಣೆ ಸಲ್ಲಿಸಿದರು.

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಮಾತೋಶ್ರೀ ಡಾ. ವಿಲಾಸವತಿ ಎಸ್. ಖೂಬಾ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಮತ್ತು ಡಾ. ಜಯಶ್ರೀ ದಂಡೆಯವರು ಉಪಸ್ಥಿತರಿದ್ದರು. ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ ಸುಮಾರು ಹತ್ತು ಸಾವಿರದಷ್ಟು ಜನರು ದತ್ತಿ ಉಪನ್ಯಾಸ, ಪುಣ್ಯಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿರುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here