ಸುರಪುರ: ಕರ್ನಾಟಕ ಮತ್ತು ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ,ಆದರೆ ಇತ್ತೀಚೆಗೆ ಬಂದಿರುವ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಕೆಲವರು ಬಲವಂತದಿಂದ ಏರುವ ಕೆಲಸ ಮಾಡುತ್ತಿದ್ದಾರೆ.ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ.ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಿಂದಿ ಸಪ್ತಾಹ ದಿನವನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಹಿಂದಿ ಕೇವಲ ಆಡಳಿತ ಭಾಷೆ ಆದರೆ ದೇಶದಲ್ಲಿನ ಎಲ್ಲಾ ಪ್ರಾದೇಶಿಕ ೨೨ ಭಾಷೆಗಳು ರಾಷ್ಟ್ರೀಯ ಭಾಷೆಗಳೆ ಆಗಿವೆ.ಆದರೆ ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ನಮ್ಮ ಮೇಲೆ ಹಿಂದಿ ಏರಿಕೆಯನ್ನು ನಡೆಸುತ್ತಿದೆ,ಇದೇ ನಡೆ ಮುಂದುವರೆದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.
ಇಂದು ನಾವು ಈ ಪ್ರತಿಭಟನೆಯ ಮೂಲಕ ಪ್ರತಿ ವರ್ಷ ಆಚರಿಸುವ ಹಿಂದಿ ದಿವಸದಂತಹ ಕಾರ್ಯಕ್ರಮ ನಿಲ್ಲಿಸಿ ಭಾರತೀಯ ಎಲ್ಲಾ ಭಾಷಾ ದಿನವಾಗಬೇಕು.೨೨ ಭಾಷೆಗಳನ್ನೂ ರಾಷ್ಟ್ರೀಯ ಭಾಷೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು. ನಂತರ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಂಬ್ಲಯ್ಯ ಬೇಟೆಗಾರ ಉಪಾಧ್ಯಕ್ಷ ಶಿವಮೋನಯ್ಯ ನಾಯಕ ಹಣಮಗೌಡ ಶಖಾಪುರ ಶ್ರೀನಿವಾಸ ಬೈರಿಮಡ್ಡಿ ಪ್ರಕಾಶ ಹೆಗ್ಗಣದೊಡ್ಡಿ ಹಣಮಂತ ಹಾಲಗೇರಾ ಆನಂದ ಮಾಚಗುಂಡಾಳ ಅಯ್ಯಪ್ಪ ವಗ್ಗಾಲಿ ಅನಿಲ ಬಿರಾದಾರ್ ಬಾಷಾ ನದಾಫ್ ಮೌನೇಶ ಕಕ್ಕೇರಾ ಬಲಭೀಮ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.