ಕಲಬುರಗಿ: ಕೇಂದ್ರ ಸರ್ಕಾರ ದೇಶದ ವಿವಿಧ ರಾಜ್ಯಗಳ ಮೇಲೆ ಹಿಂದಿ ಸಪ್ತಾಹ ದಿವಸ ಆಚರಣೆಯ ಹೆಸರಿನ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಕೂಡಲೇ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಆಳಂದ ತಾಲೂಕಾ ಘಟಕದ ಮುಖಂಡರು ಪ್ರತಿಭಟನೆ ನಡೆಸಿದರು.
ಇಂದು ಆಳಂದ ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಒಕ್ಕೂಟದ ಭಾಷಾ ಒಪ್ಪಂದದ ಪ್ರಕಾರ ಸರ್ಕಾರ ತ್ರಿಭಾಷ ನೀತಿಯನ್ನು ಅನುಮೋದಿಸದಿದ್ದರೂ ಹಿಂದಿ ಹೇರಿಕೆಯನ್ನು ಮಾಡುತ್ತಿರುವುದು ಖಂಡನೀಯವಾಗಿದೆಂದು ಆಕ್ರೋಶ ಹೊರಹಾಕಿದರು.
ಹಿಂದಿ ಹೇರಿಕೆಯಿಂದ ರಾಜ್ಯದ ವಿವಿಧ ಪ್ರಾದೇಶಿಕ ಭಾಷೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಹಿಂದಿ ಭಾಷೆ ಕಲಿಕೆಯಿಂದ ಇತರೆ ಭಾಷೆಗಳ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ ಇದರಿಂದಾಗಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು.
ಆದ್ದರಿಂದ ಹಿಂದಿ ಭಾಷೆ ಹೇರಿಕೆಯನ್ನು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಕಡ್ಡಾಯವಾಗಿ ಹೇರುವ ನಿಯಮವನ್ನು ಕೂಡಲೇ ಕೈ ಬಿಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರಾ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಹಾಂತೇಶ ಸಣ್ಣಮನಿ,ಉಪಾಧ್ಯಕ್ಷ ಆನಂದರಾಯ ಯಲಶೆಟ್ಟಿ,ಮಹಿಳಾ ಅಧ್ಯಕ್ಷೆ ವಂದನಾ,ಪ್ರಭುಲಿಂಗ ಪಾಟೀಲ,ವಕ್ತಾರ ದೌಲಪ್ಪ ವಣದೆ,ವಿಶಾಲ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.