ಕಲಬುರಗಿ: ಯಡ್ರಾಮಿ ತಾಲ್ಲೂಕಿನ ಬಳಬಟ್ಟಿ ಗ್ರಪಂಚಾಯಿತಿಗೆ ಒಳಪಡುವ ‘ಅಂಬರಖೇಡ’ ಎನ್ನುವುದು ನಮ್ಮ ಪುಟ್ಟ ಊರು, ಇಲ್ಲಿ ವ್ಯವಸ್ಥಿತವಾದ ಸಿಸಿ ರೋಡುಗಳಾಗಲಿ, ಚರಂಡಿ ವ್ಯವಸ್ಥೆಗಳಾಗಲಿ, ಶುದ್ಧ ಕುಡಿಯುವ ನೀರಿನ ಘಟಕವಾಗಲಿ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆ. ನೀರುಗಳು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳು ಹೆಚ್ಚಿಗಾಗಿ ಜಾನುವಾರುಗಳನ್ನು ಒಳಗೊಂಡು ಮನುಷ್ಯರು ಭಯಾನಕ ಸ್ಥಿತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ನಿವಾಸಿ ಸಂಗನಗೌಡ ಹಿರೇಗೌಡ ಗ್ರಾಮ ಪಂಚಾಯಿತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲದ ಆರಂಭದ ದಿನಗಳಿಂದ ಹಿಡಿದು ಇಲ್ಲಿಯವರೆಗೂ ಸೊಳ್ಳೆಗಳ ಜೋಡಿ ಸ್ನೇಹದಿಂದಲೇ ಕಾಲ ಕಳೆದಿದ್ದಾಗಿದೆ, ಈ ವರ್ಷ ಮಳೆಗಾಲ ತುಸು ಜಾಸ್ತಿ ಇರುವುದು ತಮಗೀಗಾಲೇ ಗೊತ್ತಿರುವ ಸಂಗತಿಯೂ ಕೂಡ. ಹಾಗಾಗಿ ಮಳೆ ನೀರು ನಿಂತಲ್ಲೇ ನಿಂತು, ಜಾನುವಾರಗಳಿಗೆ ಕಾಲು ರೋಗ ಬಂದಿದೆ. ಕೆಲವರು ಇದ್ದಷ್ಟು ದುಡ್ಡು ಖರ್ಚು ಮಾಡಿ ಖಾಸಗಿ ವೈದ್ಯರುಗಳನ್ನು ಕರೆಯಿಸಿ ಚಿಕಿತ್ಸೆ ಕೊಡುತ್ತಿರುವುದು ನಿರಂತರವಾಗಿ ಈಗಲೂ ನಡೆದಿದೆ. ಏತನ್ಮಧ್ಯೆ ನಿಂತ ನೀರಿನಿಂದ ಸೊಳ್ಳೆಗಳ ಸಂಖ್ಯೆ ಜಾಸ್ತಿಯಾಗಿ ಸಣ್ಣ ಮಕ್ಕಳಿಗೆ ಈಗ ಡೆಂಗ್ಯೂ ಆವರಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ರಿಪೋರ್ಟ್ ಗಳ ಪ್ರಕಾರ ಡೆಂಗ್ಯೂ ಇರುವುದು ಕೂಡಾ ಸಾಬೀತಾಗಿದೆ. ಇದಕ್ಕೆಲ್ಲಾ ನೇರ ಹೊಣೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೆಂದು ಹೇಳಬೇಕಾಗುತ್ತದೆ, ಯಾಕೆಂದರೆ ಬಳಬಟ್ಟಿ ಗ್ರಾಮದ ಬಾವಿಗಳ ಸುತ್ತ ಮುತ್ತಲಿನ ಗೊಜ್ಜು ತೆಗೆಸಿ “ಗ್ಲೆಸಿಂಗ್ ಪೌಡರ್” ಹಾಕಿರುವುದನ್ನು ಸ್ವತಃ ನಾನೇ ನೋಡಿಕೊಂಡು ಬಂದಿದ್ದೇನೆ. ನಮ್ಮೂರಲ್ಲಿ ಮಳೆಗಾಲ ಪ್ರಾರಂಭವಾಗಿದ್ದಿನಿಂದ ಹಿಡಿದು ಇಲ್ಲಿಯವರೆಗೂ ಗೊಜ್ಜು ತೆಗೆಸುವುದಿರಲಿ, ಕನಿಷ್ಠ “ಗ್ಲೆಸಿಂಗ್ ಪೌಡರ್” ಕೂಡ ಹಾಕದಿರುವುದು ಅಧಿಕಾರಿಗಳು ‘ಒಂದು ಕಣ್ಣಿಗೆ ಸುಣ್ಣ, ಮತ್ತು ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದ ತಾರತಮ್ಯ ಎದ್ದು ಕಾಣುತ್ತಿದೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಿಡಿಒ ಸರ್ ಅವರಿಗೆ ಪೋನಾಯಿಸಿ ನಮ್ಮ ಅಳಲನ್ನು ಹೇಳಿಕೊಂಡರೂ “ಹ್ಞೂಂ” ಎನ್ನುವ ಪದವನಷ್ಟೇ ಉದುರಿಸಿ “ಬೇರೆ ಕೆಲಸವಿದೆ” ಎಂದು ಕಲಬುರ್ಗಿಗೆ ಹೋದರು. ಸಾವು ಬದುಕಿನ ಜೋಡಿ ಹೋರಾಟ ಮಾಡುತ್ತಿರುವ ಮಕ್ಕಳ ಬಗ್ಗೆ ಕನಿಷ್ಠ ವಿಚಾರವೂ ಮಾಡದಿರುವುದು ಅವರ ಅಮನಾವೀಯ ಗುಣಕ್ಕೆ ನಾನು ವಿಷಾದ ವ್ಯಕ್ತ ಪಡಿಸುತ್ತೇನೆ. ಮೇಲಾಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಅಧಿಕಾರಿಯ ಮೇಲೆ ಕಾನೂನಾತ್ಮಕ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಸೊಳ್ಳೆಗಳನ್ನು ನಿಯಂತ್ರಿಸಲು ಪರ್ಯ್ಯಾಯ ಮಾರ್ಗ ಕೂಡಲೇ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆ ಜಾಸ್ತಿಯಾಗಿ ಕೂಲಿಯ ಕೆಲಸವೂ ಇಲ್ಲದ ಯಾತನಾಮಯ ಸ್ಥಿತಿ ಇರುವುದರಿಂದ ಡೆಂಗ್ಯೂ ಇಂದ ಬಳಲುತ್ತಿರುವ ಮಕ್ಕಳ ತಾಯಿ ತಂದೆಗಳನ್ನು ಕರೆಯಿಸಿ ಆಸ್ಪತ್ರೆಯ ದಾಖಲೆಗಳನ್ನು ಪರೀಶಿಲಿಸಿಯೇ ಅದರ ಒಟ್ಟು ಖರ್ಚು ಪಂಚಾಯಿತಿ ಬರಿಸುವಂತೆ ಅನುಕೂಲ ಮಾಡಿಕೊಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.