ವಾಡಿ: ಸದನದಲ್ಲಿ ಅಂಗೀಕಾರಗೊಂಡ ರೈತ ವಿರೋಧಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರುದ್ಧ ಸೆ.೨೮ ರಂದು ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹೋರಾಟಕ್ಕೆ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಪಕ್ಷದ ನಗರ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಾಮ್ರೇಡ್ ವೀರಭದ್ರಪ್ಪ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಂಗೀಕರಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಗುತ್ತಿಗೆ ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ ೨೦೦೨ರ ತಿದ್ದುಪಡಿ, ಬೆಂಬಲ ಬೆಲೆ ಕಾಯ್ದೆ ತಿದ್ದುಪಡಿಗಳ ವಿರುದ್ಧ ಮತ್ತು ರಾಜ್ಯ ಬಿಜೆಪಿ ನೇತೃತ್ವದ ಸರಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಕೆಎಸ್‌ಎಸ್‌ಸಿ) ಕರೆ ನೀಡಿರುವ ಸೆ.೨೮ರ ಕರ್ನಾಟಕ ಬಂದ್ ಹೋರಾಟ ನ್ಯಾಯಸಮ್ಮತವಾಗಿದೆ. ರೈತದ್ರೋಹಿ ಸರಕಾರಗಳ ವಿರುದ್ಧ ಸಂಘಟಿತ ಹೋರಾಟ ಕಟ್ಟಿರುವುದನ್ನು ಎಸ್‌ಯುಸಿಐ ಸ್ವಾಗತಿಸುತ್ತದೆ ಎಂದಿದ್ದಾರೆ.
ಕೋವಿಡ್-೧೯ ಮಹಾಮಾರಿಯ ಸಂದರ್ಭವನ್ನು ಬಳಸಿಕೊಂಡು ಪ್ರಜಾತಂತ್ರಿಕ ಚರ್ಚೆಗಳಿಗೆ ಅವಕಾಶ ನೀಡದೆ ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಚರ್ಚೆ ನಡೆಸದೆ ತರಾತುರಿಯಲ್ಲಿ ಈ ಕಾಯ್ದೆಗಳನ್ನು ಅಂಗೀಕರಿಸಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಿತೂರಿಯನ್ನು ಬಯಲಿಗೆಳೆದಿದೆ. ಈ ಕಾಯ್ದೆಗಳ ಜಾರಿಯಿಂದ ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯ ಕ್ಷೇತ್ರದಲ್ಲಿ ಕಾರ್ಪೋರೇಟ್ ಕುಳಗಳು ಲಗ್ಗೆಯಿಡುತ್ತವೆ. ಇದರಿಂದ ಸಣ್ಣ ಮತ್ತು ಮಧ್ಯಮ ರೈತರು ಸರ್ವನಾಶವಾಗುತ್ತಾರೆ. ಸಾಮಾನ್ಯ ಗ್ರಾಹಕರು ಬೆಲೆ ಏರಿಕೆಯಿಂದ ನಲುಗಲಿದ್ದಾರೆ.
ವಿದ್ಯುತ್ ರಂಗವೂ ಖಾಸಗೀಕರಣಗೊಂಡು ರೈತರು ಸಬ್ಸಿಡಿಯಿಂದ ವಂಚಿತರಾಗಲಿದ್ದಾರೆ. ದವಸದಾನ್ಯ, ಎಣ್ಣೆಕಾಳುಗಳು, ಈರುಳ್ಳಿಯಂತಹ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಬೆಲೆಗಳು ಹೆಚ್ಚಾಗಲಿವೆ. ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿರುವ ರೈತರು ತಮ್ಮ ಕೃಷಿಭೂಮಿಯನ್ನು ಮಾರಿ ಬೀದಿಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ವೀರಭದ್ರಪ್ಪ, ಇಂತಹ ವಿನಾಶಕಾರಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ೨೦೦ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಹೋರಾಟ ಕಟ್ಟುತ್ತಿರುವುದು ಚೇತೋಹಾರಿ ಬೆಳವಣಿಗೆಯಾಗಿದೆ.
ಕೈಗಾರಿಕಾ ಕುಸಿತದಿಂದ ನೆಲಕಚ್ಚಿರುವ ಬಂಡವಾಳಶಾಹಿಗಳಿಗೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿರುವ ಈ ರೈತದ್ರೋಹಿ ಸರಕಾರಗಳನ್ನು ಮಣಿಸಲು ದೇಶದ ಜನತೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.