ಸುರಪುರ: ರಾಜ್ಯದಲ್ಲಿ ನೂತನವಾಗಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿ ಸೋಮವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿಗಮ ಸ್ಥಾಪನೆಗೆ ಆದೇಶಿಸಿ ಟಿಪ್ಪಣಿ ಹೊರಡಿಸಿದ್ದಕ್ಕಾಗಿ ಹಿರಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ರಾಜ್ಯ ಉಪಾಧ್ಯಕ್ಷರಾದ ವಿಠಲ್ ಯಾದವ್‌ರವರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ರವಿವಾರದಂದು ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು ಕಾಡು ಗೊಲ್ಲ ಅಭಿವೃದ್ಧಿ ನಿಗಮ ರಚಿಸುವ ಬಗ್ಗೆ ಘೋಷಿಸಿದಾಗ ಈ ಬಗ್ಗೆ ಸಮಾಜದ ಧುರೀಣೆ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ, ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ ಮತ್ತು ರಾಜ್ಯದ ಸಮಾಜದ ಪ್ರಮುಖರು ಗೊಲ್ಲ ಮತ್ತು ಅದಕ್ಕೆ ಸಮಾನಾಂತರವಾದ ೨೮ ಜಾತಿಗಳಿದ್ದು ಎಲ್ಲವೂ ಗೊಲ್ಲ ಜಾತಿಯಲ್ಲೇ ಇರುತ್ತವೆ ಹೀಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡುವದರಿಂದ ಜನಾಂಗವನ್ನು ವಿಂಗಡನೆ ಮಾಡಿದಂತಾಗುತ್ತದೆ.
ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟ ನಂತರ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಹಿಂದೆ ಆಯ-ವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪನೆಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸುವ ಮೂಲಕ ಆದೇಶಿಸಿರುವುದಕ್ಕೆ ಮುಖ್ಯಮಂತ್ರಿಗಳನ್ನು ಹಾಗೂ ಸಮಾಜದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸರವರನ್ನು ವಿಠಲ್ ಯಾದವ್‌ರವರು ಅಭಿನಂದಿಸಿದ್ದಾರೆ.
ಎಲ್ಲಾ ಗೊಲ್ಲ ಸಮಾಜವನ್ನು ಒಂದೇ ಗುಂಪಿನಡಿ ಪರಿಗಣಿಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿರುವುದಕ್ಕೆ ರಾಜ್ಯದಲ್ಲಿನ ಸಮಸ್ತ ಗೊಲ್ಲ (ಯಾದವ್) ಹಾಗೂ ಸಮಾನಾಂತರ ಜಾತಿಗಳ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.