ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಒಂದು ಸದಸ್ಯ ಸ್ಥಾನದ ಆಯ್ಕೆಗಾಗಿ ಅಕ್ಟೋಬರ್ 28 ರಂದು ಚುನಾವಣೆ ನಡೆಯಲಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಬಳಿ ನಗದಾಗಿ 50 ಸಾವಿರ ರೂ. ಕ್ಕಿಂತ ಹೆಚ್ಚಿನ ಹಣ ಇಟ್ಟುಕೊಳ್ಳುವಂತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ವಿ.ವಿ.ಜ್ಯೋತ್ಸ್ನಾ ಹೇಳಿದರು.
ಸೋಮವಾರ ಅವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದರು.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣಾ ಖರ್ಚಿಗೆ ಯಾವುದೇ ಮಿತಿ ಇಲ್ಲ ಎಂದು ಸ್ಪಷ್ಠಪಡಿಸಿದ ಜಿಲ್ಲಾಧಿಕಾರಿಗಳು ಇತರೆ ಚುನಾವಣೆಗಳಂತೆ ಮಾದರಿ ನೀತಿ ಸಂಹಿತೆ ಇಲ್ಲಿಯೂ ಅನ್ವಯವಾಗಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಂತಿ ರೀತಿಯ ಚುನಾವಣೆಗೆ ಸಹಕರಿಸಬೇಕು ಎಂದು ವಿ.ವಿ.ಜ್ಯೋತ್ಸ್ನಾ ಅವರು ಮನವಿ ಮಾಡಿದರು.
ಪ್ರಸ್ತುತ ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಪ್ರಚಾರದ ಸಂದರ್ಭದಲ್ಲಿ ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ನಿರ್ದೇಶನ ನೀಡಿದ ಅವರು ಪ್ರತಿ ಮತದಾನ ಕೇಂದ್ರಕ್ಕೆ ರಾಜಕೀಯ ಪಕ್ಷಗಳು ಮೂವರು ಮತದಾನ ಏಜೆಂಟ್‍ಗಳ ಹೆಸರನ್ನು ಆದಷ್ಟು ಬೇಗ ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.
ದಿ. 16-01-2020 ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 7329 ಮತದಾರರಿದ್ದು, ಇದರಲ್ಲಿ 4333 ಪುರುಷರು ಮತ್ತು 2996 ಮಹಿಳೆಯರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ 2020ರ ಜನವರಿ 16ರ ನಂತರ 1213 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಮತದಾನಕ್ಕೆ 41 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಕಾರ್ಯಕ್ಕಾಗಿ 41 ಜನ ಪಿ.ಆರ್.ಓ, 41 ಏ.ಪಿ.ಆರ್.ಓ. ಹಾಗೂ 82 ಜನ ಪೊಲಿಂಗ್ ಸಿಬ್ಬಂದಿ ಸೇರಿದಂತೆ ಒಟ್ಟಾರೆ 164 ಜನರನ್ನು ನಿಯೋಜಿಸಲಾಗಿದೆ ಎಂದರು.
ಚುನಾವಣಾ ಅಕ್ರಮ ತಡೆಯಲು ಮತ್ತು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು 13 ಎಫ್.ಎಸ್.ಟಿ. ತಂಡ, 13 ವಿ.ಎಸ್.ಟಿ. ತಂಡ, 13 ವಿ.ವಿ.ಟಿ ತಂಡ ಹಾಗೂ 17 ಜನ ಸೆಕ್ಷನ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಡಿ.ಸಿ. ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸೆ.29 ರಂದು ಚುನಾವಣಾ ಆಯೋಗ ಘೋಷಣೆ ಮಾಡಿರುವುದರಿಂದ ಅಂದಿನಿಂದಲೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಪ್ರಚಾರ, ಸಭೆ-ಸಮಾರಂಭ ಆಯೋಜನೆಗೆ ಎಲ್ಲಾ ರಾಜಕೀಯ ಪಕ್ಷಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ಸಂಬಂಧ ಸಿಂಗಲ್ ವಿಂಡೋ ಕೇಂದ್ರ ತೆರೆಯಲಾಗುವುದು. ಇದಲ್ಲದೆ ವಿದ್ಯುನ್ಮಾನ ವಾಹಿನಿ ಮತ್ತು ಧ್ವನಿ ಮುದ್ರಿತ ಪ್ರಚಾರಕ್ಕೆ ಜಿಲ್ಲಾ ಮಾಧ್ಯಮ ಪ್ರಮಾಣೀಕೃತ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡೆ ಪ್ರಚಾರ ಕಾರ್ಯ ನಿರ್ವಹಿಸಬೇಕು ಎಂದರು.
ಅಕ್ಟೋಬರ್ 1ಕ್ಕೆ ಈಗಾಗಲೆ ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಸಲು ಅಕ್ಟೋಬರ್ 8 ಕೊನೆ ದಿನವಾಗಿದೆ. ನಾಮಪತ್ರಗಳನ್ನು ಅಕ್ಟೋಬರ್ 1 ರಿಂದ 8ರ ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯ ಕಾನ್ಫೆರೆನ್ಸ್ ಸಭಾಂಗಣ, ಎರಡನೇ ಮಹಡಿ ಮಿನಿ ವಿಧಾನಸೌಧ ಕಲಬುರಗಿ ಇಲ್ಲಿ ಸಲ್ಲಿಸಬಹುದಾಗಿದೆ. ಸ್ವೀಕೃತ ನಾಮಪತ್ರಗಳ ಪರಿಸೀಲನಾ ಕಾರ್ಯ ಅಕ್ಟೋಬರ್ 9 ರಂದು ನಡೆಯಲಿದ್ದು. ನಾಮಪತ್ರ ಹಿಂದಕ್ಕೆ ಪಡೆಯಲು ಅಕ್ಟೋಬರ್ 12 ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ 28 ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ನವೆಂಬರ್ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ವೇಳಾಪಟ್ಟಿ ಬಗ್ಗೆ ವಿವರಿಸಿದರು.
ಅ.8ರ ವರೆಗೆ ಹೆಸರು ಸೇರಿಸಬಹುದು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಅರ್ಹರಿರುವ ಮತದಾರರು ಅಕ್ಟೋಬರ್ 8ರ ಮಧ್ಯಾಹ್ನ 3 ಗಂಟೆ ವರೆಗೆ ನಮೂನೆ 19ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸಹಾಯವಾಣಿ ಸ್ಥಾಪನೆ: ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರು ಮತ್ತು ಕುಂದುಕೊರತೆಗಳಿಗಾಗಿ ಸಹಾಯವಾಣಿ 08472-278602 ಸ್ಥಾಪಿಸಲಾಗಿದೆ.
ಕೊರೋನಾ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ: ಕೋವಿಡ್-19 ಸೊಂಕಿತರಿಗೆ ಮತ್ತು ಹೋಂ ಕ್ವಾರಂಟೈನ್‍ದಲ್ಲಿದ್ದವರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುತ್ತಿದೆ.
ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿದ್ದರು.