ಭಾಗ-15: ಕಡಕೋಳ ಕಾಲಂ: ನಾನು ಕೊಂದ ಸುನಂದಾಬಾಯಿ ಕೊಡ

0
203

ಸುತ್ತ ನಾಕಿಪ್ಪತ್ತು ಹಳ್ಳಿಗಳಲ್ಲಿ ಅವರ ಬಡತನ ಪ್ರಸಿದ್ದವಾಗಿತ್ತು. ತಲೆಮಾರುಗಳಿಂದ ಶೀಲವಂತರ ಸುನಂದಾಬಾಯಿ ಭಗವಂತ್ರಾಯ ದಂಪತಿಗಳು ಪಡೆದುಕೊಂಡ ಆಸ್ತಿಯೆಂದರೆ ಕಿತ್ತು ತಿನ್ನುವ ಬಡತನ. ಅದನ್ನೇ ಹಾಸುಂಡು ಬೀಸಿ ಒಗೆಯುವಂತಿತ್ತು. ನಮ್ಮೂರು ಮಾತ್ರವಲ್ಲ. ಸುತ್ತ ಹತ್ತಾರು ಹಳ್ಳಿಯ ಮಂದಿ ಘೋರ ಬಡತನದ ಬಗ್ಗೆ ಮಾತಾಡುವಾಗ ಶೀಲವಂತರ ಬಡತನ ಉಲ್ಲೇಖಿಸದೇ ಇರಲಿಕ್ಕೆ ಸಾಧ್ಯವಿರುತ್ತಿರಲಿಲ್ಲ.

ಅವರು ಉಪವಾಸದ ದಿನಗಳನ್ನು ನೆನಪಿಡುತ್ತಿರಲಿಲ್ಲ. ಗಂಜಿ ಕುಡಿದ ದಿನಗಳನ್ನು ನೆನಪಿಡುತ್ತಿದ್ದರು. ಈ ದಿನಗಳೇ ಅಪರೂಪ. ಸಜ್ಜೆ ಹಿಟ್ಟಿನ ಗಂಜಿಗೆ ರುಚಿ ಬರಲೆಂದು ಸೇರಿಸಲು ” ಉಪ್ಪಿಗೂ ” ಅವರಲ್ಲಿ ಬಡತನವಿತ್ತು. ಅಂತೆಯೇ ಉಪವಾಸದ ದಿನಗಳೇ ಹೇರಳ. ಗಂಜಿ ಕುಡಿದ ದಿನಗಳೇ ವಿರಳ.

Contact Your\'s Advertisement; 9902492681

ಸುನಂದಾ ಬಾಯಿಗೆ ಜಾಂಬಳ ಬಣ್ಣದ ಒಂದೇ ಒಂದು ಸೀರೆ ಇತ್ತು. ಮೈ ಮೇಲಿನ ಆ ಒಂದು ಸೀರೆಯನ್ನು ಜಳಕ ಮಾಡುವಾಗ ಅರ್ಧರ್ಧ ತೋಯಿಸುತ್ತಾ ಒಣಗಿಸಿಕೊಳ್ಳುತ್ತಿದ್ದಳು. ಕೂಲಿ ನಾಲಿ ಮಾಡುವಾಗ ಸೀರೆ ಗಿಡಗಂಟಿಗಳಿಗೆ ತಾಗದಂತೆ ಮತ್ತು ಕುಂತೇಳುವಾಗ ಜಿಗಿ ಸತ್ತ ಸೀರೆ ಟಸಕ್ಕನೆ ಹರಿದು ಹೋಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಳು.

ತನ್ನ ಮಾನ ಮರ್ಯಾದೆ ಕಾಪಾಡುವ ಏಕೈಕ ಸೀರೆ ಅದಾಗಿತ್ತು. ಹೋದ ವರುಷ ಕುಂಡೀ ಪದರಲ್ಲಿ ಅದು ಹರಿದು ಹೋದುದಕ್ಕೆ ಹರಿದು ಹೋದ ಭಾಗವನ್ನು ಕುಡುಗೋಲಿನಿಂದ ಕೊಯ್ದು ತೆಗೆದು ಸೂಜಿ ದಾರಗಳಿಂದ ಉದ್ದಕ್ಕೂ ದಿಂಡು ಹಾಕಿದ್ದಳು. ಹಾಗೆ ಮಾಡುವಾಗ ಮೈ ತುಂಬಾ ಕೌದಿ ಹೊದ್ದು ಕೊಂಡಿದ್ದಳು. ತನ್ನ ಮಾನರಕ್ಷಕ ಸೀರೆಯನ್ನು ಹೊಲಿದು ದುರಸ್ತಿಗೊಳಿಸಿದ ಮೇಲೆ ಕೌದಿ ತೆಗೆದಿಟ್ಟು ಸೀರೆ ಉಟ್ಟು ಕೊಂಡಿದ್ದಳೆಂಬುದು ನಾನು ಸಣ್ಣವನಿದ್ದಾಗ ಕೇಳಿದ ನೆನಪು ಹಚ್ಚ ಹಸಿರಾಗಿದೆ. ಆಕೆಯ ಕುಪ್ಪಸದ್ದು ಇಂತಹದ್ದೇ ಕರುಣಾಜನಕ ಕತೆ.

ಭಗವಂತ್ರಾಯನ ಧೋತರ ಮತ್ತು ಅಂಗಿಯ ಕತೆಗಳು ಇದಕ್ಕಿಂತ ಭಿನ್ನವಾಗಿರದೇ ಕರುಳು ಚುರುಗುಟ್ಟಿಸುವಂತಹದ್ದೇ ಆಗಿದ್ದವು. ಆತ ಯಾವತ್ತೂ ತೊಡೆಯಿಂದ ಈಚೆ ಮೊಳಕಾಲ ಕೆಳಗೆ ಧೋತರ ಇಳಿ ಬಿಟ್ಟಿದ್ದನ್ನೇ ನನ್ನ ಕಣ್ಣುಗಳು ಕಂಡಿಲ್ಲ. ಕಾರಣ ಆತನ ಧೋತರದ ಮೈ ತುಂಬಾ ಹರಿದ ಗಾಯಗಳೇ ತುಂಬಿದ್ದವು. ಗಾಯಗಳನ್ನೆಲ್ಲ ಗಂಟು ಹಾಕಿರುತ್ತಿದ್ದನಾದ್ದರಿಂದ ಆತನ ಮಾನದ ಹಿಂದು ಮುಂದುಗಳನ್ನು ಆ ಎಲ್ಲ ಗಾಯ ಗಂಟುಗಳ ಧೋತರ ಮುಚ್ಚಿ ಕೊಂಡಿರುತ್ತಿತ್ತು.

ಆತನಿಗೊಂದು ಪಟಗವಿತ್ತು. ಅವರಪ್ಪ ತೀರಿಕೊಂಡಾಗ ರುದ್ರಭೂಮಿಯ ಕುಣಿಯ ಮೇಲೆಯೇ ಈತನಿಗೆ ವಾರಸುದಾರಿಕೆಯಾಗಿ ಬಂದ ಏಕೈಕ ಆಸ್ತಿ ಅದಾಗಿತ್ತು. ಭಗವಂತ್ರಾಯನಿಗೆ ಅಪ್ಪನಿಂದ ಬಂದ ಆ ಆಸ್ತಿಯನ್ನು ದೀವಳಿಗೆ, ಉಗಾದಿ ಹಬ್ಬಗಳಲ್ಲಿ ತಲೆಗೆ ಕಟ್ಟು ಹೊಡೆದು ಸುತ್ತಿ ಕೊಂಡು ಸಂಭ್ರಮಿಸುತ್ತಲೇ ಅದನ್ನು ಜೋಪಾನ ಮಾಡಿಟ್ಟು ಕೊಂಡಿದ್ದ.

ಮುಡ್ಡೀ ಚಾಟಿಯಂತಹ ಅಂಗಿ ಹರಿದು, ಸವೆದು ಹೋಗಿತ್ತು. ಅವನ ಅಪ್ಪನ ಅಪ್ಪನಿಂದ ಬಂದ ಮತ್ತೊಂದು ಆಸ್ತಿಯೆಂದರೆ ಗುದ್ದಲಿ. ನಟ್ಟು ಕಡಿದು, ಮಣ್ಣಿನ ಕೆಲಸದಿಂದ ಗಂಜಿ ದೊರಕಿಸಿ ಕೊಡುತ್ತಿದ್ದುದೇ ಈ ಗುದ್ದಲಿ. ಅಂತೆಯೇ ಗುದ್ದಲಿಯನ್ನು ತಮ್ಮ ಜೀವದಷ್ಟೇ ಜೋಪಾನ ಮಾಡುತ್ತಿದ್ದರು. ಅಮವಾಸ್ಯೆಗೊಮ್ಮೆ ಗುದ್ದಲಿ, ಕುರ್ಪಿ, ಕುಡುಗೋಲುಗಳಿಗೆ ಪೂಜೆ ಸಲ್ಲಿಸುತ್ತಿದ್ದರು.

ಸುನಂದಾ ಬಾಯಿ ಭಗವಂತ್ರಾಯರ ಲಗ್ನವಾದ ವರುಷ ಮೋಟಗಿ ಸಂತೆಯಲ್ಲಿ ದೀಡು ರುಪಾಯಿ ಕೊಟ್ಟು ತಂದ ಮಣ್ಣಿನ ಕೊಡವನ್ನು ಅವರು ತಮ್ಮ ಜೀವದಷ್ಟೇ ಜೋಪಾನ ಮಾಡಿಕೊಂಡು ಬರುತ್ತಿದ್ದುದು ಅವರ ಬದುಕಿನ ದಾಖಲೆಯಷ್ಟೇ ಅಲ್ಲ, ಅವರ ಬಡತನದಷ್ಟೇ ಖ್ಯಾತಿಯನ್ನು ಆ ಮಣ್ಣಿನ ಕೊಡ ಪಡಕೊಂಡಿತ್ತು. ಗಬಸಾವಳಗಿಯ ಕುಂಬಾರರು ಗಟ್ಟಿ ಮುಟ್ಟಾಗಿ ಸುಟ್ಟು ಮಾಡಿದ ಮಣ್ಣಿನ ಕೊಡ ಅದಾಗಿತ್ತು.

ಆ ಮಣ್ಣಿನ ಕೊಡವನ್ನು ಅದೆಷ್ಟು ಜಾಗರೂಕತೆಯಿಂದ ಬಳಕೆ ಮಾಡುತ್ತಿದ್ದರೆಂದರೆ ತಮ್ಮ ಪ್ರಾಣವನ್ನೂ ಅವರು ಎಂದೂ ಅಷ್ಟೊಂದು ಎಚ್ಚರದಿಂದ ಸಲಹಿಕೊಂಡ ನೆನಪು ಖಂಡಿತಾ ಅವರಿಗಿಲ್ಲ. ಗಂಡ ಹೆಂಡತಿ ಇಬ್ಬರಲ್ಲಿ ಯಾರೇ ಹಳ್ಳದ ನೀರು ತರಲು ಹೋದಾಗ ಸಮನಾದ ಸಮಚಿತ್ತದ ಎಚ್ಚರ ವಹಿಸುತ್ತಿದ್ದರು. ವರತಿ ನೀರನ್ನು ಕೊಡಕ್ಕೆ ತುಂಬುವಾಗ ಅಪ್ಪೀ ತಪ್ಪಿಯೂ ತಂಬಿಗೆಯನ್ನು ಕೊಡದ ಕಂಠಕ್ಕೆ ಮುಟ್ಟಿಸುತ್ತಿರಲಿಲ್ಲ. ಒಮ್ಮೊಮ್ಮೆ ಚೆರಿಗೆಯನ್ನು ದೂರವಿಟ್ಟು ಬೊಗಸೆಯಿಂದಲೇ ಕೊಡ ತುಂಬಿಸುತ್ತಿದ್ದರು.

ಅವರ ಮನೆಯಲ್ಲಿ ಮಣ್ಣಿನ ಹರವಿ ಇತ್ತು. ಅದಕ್ಕೊಂದು ಮಣ್ಣಿನ ಮುಚ್ಚಳ. ಹರವಿಗೆ ಕೊಡದಿಂದ ನೀರು ಬರಕುವಾಗ ಅಷ್ಟೇ ಎಚ್ಚರ. ಅಪ್ಪೀ ತಪ್ಪಿಯೂ ಹರವಿ ಮತ್ತು ಕೊಡದ ಕಂಠಗಳು ಮುತ್ತಿಕ್ಕುತ್ತಿರಲಿಲ್ಲ. ಅಂತಹ ಕಟ್ಟೆಚ್ಚರ ಅವರಿಬ್ಬರದು. ಅವರಿಗೊಬ್ಬ ಮಗಳು ಹುಟ್ಟಿದಳು. ನಾಕೈದು ವರುಷದ ಬೆಳೆದು ನಿಂತ ಆ ಹುಡುಗಿಗೆ ಹೋಳಿಗೆ ಅನ್ನ ಸಾರುಗಳೆಂಬ ಹೆಸರುಗಳನ್ನು ಕೇಳಿ ಗೊತ್ತಿತ್ತೆ ಹೊರತು ಅವನ್ನು ಕಂಡುಂಡ ಅನುಭವ ಖಂಡಿತಾ ಇರಲಿಲ್ಲ. ಅದೇನಿದ್ದರೂ ಗಂಜಿಯೇ ಅವರ ಪಾಲಿನ ಮೃಷ್ಟಾನ್ನ.

ಆಗಾಗ ಆ ಹುಡುಗಿ ಕೆಮ್ಮು ಜ್ವರಗಳಿಂದ ನರಳುತ್ತಿದ್ದರೆ ಲಕ್ಕಿ ತಪ್ಪಲು ತಲೆಗೆ ಕಟ್ಟಿ ಮಲಗಿಸುವುವುದು ಇಲ್ಲವೇ ದ್ಯಾಮವ್ವನ ಗುಡಿಯ ಬೂದಿ, ಗಿರಿಮಲ್ಲಯ್ಯ ಸ್ವಾಮಿಗಳು ಕಟ್ಚುವ ಚೀಟಿ ಚಿಪಾಟಿಗಳೇ ಅವರಿಗಿರುವ ಆಧಾರ. ಅವರೆಂದೂ ದವಾಖಾನೆಗೆ ಹೋದವರಲ್ಲ. ಹೋಗಲು ರೊಕ್ಕ ಬೇಕಲ್ಲ.

ಇಷ್ಟೆಲ್ಲ ಕ್ರೂರ ಬಡತನವಿದ್ದರೂ ಅವರು ಯಾರೊಬ್ಬರ ಮನೆಗೆ ಹೋಗಿ ದೈನೇಸಿ ಎಂದು ಕೈಯೊಡ್ಡಿದವರಲ್ಲ. ಹಾಗೇ ಹಸಿವಿನಿಂದ, ನೋವಿನಿಂದ ಸತ್ತಾರೇ ಹೊರತು ಅವರಿವರ ಮನೆಗೆ ಹೋದವರಲ್ಲ. ಬೇರೆಯವರ ಮನೆಯಲ್ಲಿ ಊಟದ ಮಾತು ದೂರವೇ. ಬಡತನ ಬಿಟ್ಟು ಬದುಕಿದ್ದು ಅವರಿಗೆ ಗೊತ್ತಿಲ್ಲ. ನನಗಂತೂ ಅವರ ಮನೆಯ ಮಿರಿ ಮಿರಿ ಮಿಂಚುವ ಮಣ್ಣಿನ ಕೊಡ ಅವರ ಬಡತನಕ್ಕಿಂತ ಹೆಚ್ಚು ಪ್ರಿಯವಾಗಿ ಕಾಣುತ್ತಿತ್ತು. ಅವರು ಹಳ್ಳಕ್ಕೆ ನೀರಿಗೆ ಬಂದಾಗೆಲ್ಲ ಆ ಕೊಡವನ್ನು ಕಣ್ತುಂಬಿಸಿ ಕೊಳ್ಳುತ್ತಿದ್ದೆ. ಅದಕ್ಕೆ ಮುತ್ತಿಕ್ಕ ಬೇಕೆನ್ನುವಷ್ಟು ಆ ಕೊಡದ ಮೇಲೆ ನನ್ನ ಅದಮ್ಯ ಪ್ರೀತಿ. ಅರ್ಧ ಮೈಲಿ ದೂರದ ಲಂಡೇನಹಳ್ಳಕ್ಕೆ ನೀರು ತರಲು ಎಂದಿನಂತೆ ನಾನೂ ಹೋದೆ. ಕಡು ಬೇಸಿಗೆಯಾದ್ದರಿಂದ ಹಳ್ಳದಲ್ಲಿ ನೀರು ಹರಿಯುತ್ತಿರಲಿಲ್ಲ. ಉಸುಕಿನಲ್ಲಿ ತೋಡಿದ ವರತೆಯಿಂದ ನೀರು ಕೊಡಕ್ಕೆ ತುಂಬಿಸಿ ಕೊಳ್ಳಬೇಕಿತ್ತು.

ಮೊಳ ಕಾಲುದ್ದದೊಳಗಿನ ವರತೆಯಿಂದ ಸುನಂದಾ ಬಾಯಿ ತನ್ನ ಮಣ್ಣಿನ ಕೊಡಕ್ಕೆ ಚೆರಿಗೆಯಿಂದ ನೀರು ತುಂಬಿಸಿಕೊಳ್ಳುತ್ತಿದ್ದಳು. ನನಗೋ ಆ ಮಣ್ಣಿನ ಕೊಡವನ್ನು ಕೈ ಗೆಟಕುವ ಸನಿಹದಿಂದ ನೋಡುವ ಭಾಗ್ಯ. ಹತ್ತತ್ತಿರ ಅದಕ್ಕೆ ಇಪ್ಪತ್ತರ ಪ್ರಾಯವಿದ್ದೀತು. ಸವೆದು ಸವೆದು ಮಣ್ಣಿನ ಕೊಡ ಮಿರಿ ಮಿರಿ ಮಿಂಚುತ್ತಿತ್ತು. ಮನೆಯಲ್ಲಿ ನೀರು ತುಂಬಿಟ್ಟಾಗ ಚೇಳೊಂದು ಕೊಡಕ್ಕೆ ಕುಟುಕಿ ಸಣ್ಣದೊಂದು ತೂತಾಗಿ ಆ ತೂತಿಗೆ ಸರಿಯಾಗಿ ಹರಕು ಬಟ್ಟೆಯ ಬತ್ತಿ ಸುತ್ತಿ ಸೇರಿಸಿದ್ದರಿಂದ ಕೊಡಕ್ಕೊಂದು ಕಪ್ಪು ಚಿಕ್ಕೆ ಬಿದ್ದಂಗಿತ್ತು.

ಅದೆಷ್ಟೋ ವರುಷಗಳಿಂದ ದೂರದಿಂದಲೇ ನೋಡುತ್ತಾ ಬಂದ ನನಗವತ್ತು ಅಷ್ಟು ಸನಿಹದಿಂದ ನೋಡುವ ಸದವಕಾಶ. ಆ ಕೊಡ ಕುರಿತು ಅದರ ಆಯಸ್ಸು ಕುರಿತು ಜನರಾಡುತ್ತಿದ್ದ ಮಾತು ಕತೆಗಳು ನನಗೆ ದಂತ ಕತೆಗಳಾಗಿ ಕೇಳಿಸ ತೊಡಗಿದವು. ಅದೇಕೋ ಕೊಡವನ್ನು ಮುಟ್ಟಬೇಕೆನಿಸಿತು. ನೇರವಾಗಿ ಹೇಗೆ ಮುಟ್ಟುವುದೆಂತು ಧೇನಿಸಿ, ಧೇನಿಸಿ ಧೈರ್ಯ ತಾಳದೇ… ಅಚಾತುರ್ಯದಲ್ಲೆಂಬಂತೆ ವರತಿಯ ಹತ್ತಿರ ಸರಿದಂತೆ ಮಾಡಿ, ನನ್ನೆರಡೂ ಅಂಗೈಗಳಿಂದ ಸುನಂದಾ ಬಾಯಿಯ ಕೊಡ ಮುಟ್ಟಿದೆ. ನನ್ನ ಒಡಲಾಳದ ಬಯಕೆ ಈಡೇರಿಸಿಕೊಂಡೆ.

ಕೊಡಕ್ಕೆ ನನ್ನ ಕೈ ತಾಗಿಸಿದ ಮಿಂಚಿನ ಕ್ಷಣಗಳಲ್ಲೇ ಸುನಂದಾಬಾಯಿ ಕೊಡ ಬಿಟ್ಟು ದೂರಕ್ಕೆ ಹೋಗಿ ತಲೆ ಮೇಲೆ ಕೈ ಹೊತ್ತು ಒಂದೇ ಸಮನೆ ” ಗೊಳೋ ” ಅಂತ ಪ್ರಾಣ ಕಳಕೊಂಡವರಂತೆ ಅಳ ತೊಡಗಿದಳು. ನಮ್ಮ ಕುಲದ ಶೀಲವೇ ಹಾಳಾಯಿತೆಂದು ಅಳುತ್ತಿರುವುದನ್ನು ಕಂಡ ಬಡಿಗೇರ ಇಮ್ಮಣ್ಣ ನನಗೆ ಹುಚ್ಚು ನಾಯಿಗೆ ಹೊಡೆಯುವಂತೆ ಜನ್ಮ ಜನ್ಮಕು ನೆನಪಿಡುವಂತೆ ಥಳಿಸಿದ. ನಾವು ಶೂದ್ರರು ಶೀಲವಂತರ ಕೊಡ ಮುಟ್ಟಿಸಿ ಕೊಳ್ಳಬಾರದೆಂಬುದು ನನಗೆ ಗೊತ್ತಿರಲಿಲ್ಲ. ಸುನಂದಾ ಬಾಯಿ ಆ ಕೊಡವನ್ನು ಅಲ್ಲೇ ಒಡೆದು ಹಾಕಿದಳು. ಆದರೆ ನನಗೆ ಮಾತ್ರ ಇವತ್ತಿಗೂ ಸುನಂದಾ ಬಾಯಿಯ ಮಣ್ಣಿನ ಕೊಡ ಕೊಂದು ಹಾಕಿದ ಪಾಪ ಪ್ರಜ್ಞೆ ಆಕೆಯ ಮಡಿವಂತಿಕೆಯ ಮನಸಿಗಿಂತ ಘೋರವಾಗಿ ಕಾಡುತ್ತಲೇ ಇದೆ.

-ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here