ಸುರಪುರ: ತಾಲೂಕಿನ ಬೋನಾಳ ಗ್ರಾಮದ ರೈತ ಹಣಮಪ್ಪ ಜೆಟ್ಟೆಪ್ಪ ಎಂಬುವವರು ತಮ್ಮ ಜಮೀನಲ್ಲಿ ಬೆಳೆದಿದ್ದ ಭತ್ತ ಬುಧವಾರ ಸುರಿದ ಮಳೆ ಗಾಳಿಯಿಂದಾಗಿ ಸಂಪೂರ್ಣ ನೆಲಕಚ್ಚಿದ್ದು ರೈತ ಬೆಳೆ ಹಾನಿಯಿಂದಾಗಿ ತೀವ್ರ ದುಃಖಕ್ಕೀಡಾಗಿದ್ದಾನೆ.
ಬೆಳೆ ನಷ್ಟದ ಕುರಿತು ರೈತ ಹಣಮಪ್ಪ ಮಾತನಾಡಿ,ಆರು ಎಕರೆಯಲ್ಲಿ ಸಾಲ ಮಾಡಿ ಬೀಜ ಗೊಬ್ಬರ ತಂದು ಭತ್ತ ಬೆಳೆದಿದ್ದೆ ಇನ್ನೇನು ಒಂದು ತಿಂಗಳಲ್ಲಿ ಭತ್ತ ಕೈಗೆ ಬಂದು ಸಾಲ ತೀರಲಿದೆ ಎಂದು ನೆಮ್ಮದಿಯಲ್ಲಿರುವಾಗ ನಮ್ಮ ಬದುಕಿನ ನಾಶಕ್ಕೆ ಬಂದ ಗಾಳಿ ಮಹಾ ಮಳೆಯಿಂದಾಗಿ ಎಲ್ಲ ಭತ್ತವು ಈಗ ನೆಲಕಚ್ಚಿ ಮಣ್ಣು ಪಾಲಾಗಿದೆ.ಭತ್ತ ಈಗ ಕಾಳು ಕಟ್ಟುತ್ತಿದ್ದ ಸಮಯಕ್ಕೆ ನೆಲಕ್ಕೆ ಬಿದ್ದಿದ್ದರಿಂದ ಭತ್ತ ಕಾಳು ಆಗುವುದೇ ಅನುಮಾನವಾಗಿದೆ.
ಸಾಲ ಮಾಡಿ ಕೃಷಿ ಮಾಡಿದರೆ ಈಗ ಇಂತಹ ದುಸ್ಥಿತಿ ಬಂದಿದೆ ಮುಂದೆ ಸಾಲ ಹೇಗೆ ತೀರಿಸುವುದೆಂದು ದೊಡ್ಡ ಚಿಂತೆಯಾಗಿದೆ.ಸರಕಾರ ಕೂಡಲೆ ನಮ್ಮ ನೆರವಿಗೆ ಬರಬೇಕು ಇಲ್ಲವಾದಲ್ಲಿ ನನಗೆ ಸಾವೇ ಗತಿಯಾಗಲಿದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.