ಸುರಪುರ: ತಾಲೂಕಿನ ಕನ್ನಳ್ಳಿ ಗ್ರಾಮದಲ್ಲಿ ರೈತನೋರ್ವ ಒಂದು ಎಕರೆಯಲ್ಲಿ ಬೆಳೆದಿದ್ದ ಚೆಂಡು ಹೂವಿನ ಬೆಳೆ ಸುರಿದ ಮಹಾ ಮಳೆಯಿಂದ ಕೊಳೆಯಲಾರಂಭಿಸಿದೆ.ಮುಂದೆ ಬರುತ್ತಿರುವ ದಸರಾ ಹಾಗು ದೀಪಾವಳಿ ಹಬ್ಬಕ್ಕೆ ಹೂ ಮಾರಾಟ ಮಾಡಿ ಒಳ್ಳೆ ಲಾಭದ ನಿರೀಕ್ಷೆಯಲ್ಲಿದ್ದ ರೈತ ಈಗ ಆತಂಕದಿಂದ ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ.
ಕನ್ನಳ್ಳಿ ಗ್ರಾಮದ ರೈತ ಬಸನಗೌಡ ಎಂಬುವವರು ತಮ್ಮ ಒಂದು ಎಕರೆ ಜಮೀನಲ್ಲಿ ಚೆಂಡು ಹೂವಿನ ಬೇಸಾಯ ಮಾಡಿದ್ದಾರೆ.ಇನ್ನೇನು ಹೂ ಕಟಾವಿನ ಹಂತಕ್ಕೆ ಬಂದ ಸಂದರ್ಭದಲ್ಲಿಯೇ ಸುರಿದ ಮಹಾ ಮಳೆಯು ಇಡೀ ರೈತನ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.
ಈಗ ಹೂಗಳು ನಿಧಾನಕ್ಕೆ ಕೊಳೆಯಲಾರಂಭಿಸಿದ್ದು ಇದರಿಂದ ರೈತನ ಬದುಕು ಕೂಡ ಸಂಕಷ್ಟಕ್ಕೆ ದೂಡುತ್ತಿದೆ.ಬೆಳೆ ನಷ್ಟದ ಜಮೀನಿಗೆ ಈಗಾಗಲೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಸರಕಾರ ಪರಿಹಾರ ನೀಡಬೇಕೆಂದು ರೈತ ಬಸನಗೌಡ ವಿನಂತಿಸುತ್ತಿದ್ದಾರೆ.