ಕಲಬುರಗಿ: ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಯು ಪ್ರಸಕ್ತ ಸಾಲಿನ ನೀಟ್ ದೀರ್ಘ ಕಾಲದ ರಿಪೀಟರ್ಸ್ ಗಳಿಗೆ ರೂ.೫ ಕೋಟಿಯ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಾಗೂ ಅತಿವೃಷ್ಟಿಯಿಂದಾಗಿ ವಿದ್ಯಾರ್ಥಿಗಳ ಪಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ನೀಟ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೯ನೇ ಹಾಗೂ ಕರ್ನಾಟಕಕ್ಕೆ ಮೊದಲ ಸ್ಥಾನಗಳಿಸಿದ ಸಂಭ್ರಮದಲ್ಲಿರುವ ಸಂಸ್ಥೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಮೂಲಕ ನೆರವಾಗಲು ನಿರ್ಧರಿಸಿದೆ ಎಂದು ತಿಳಿಸಿದರು.
ಸಂಸ್ಥೆಯ ದೇಶದ ಎಲ್ಲಾ ಶಾಖೆಗಳಲ್ಲೂ ವಿದ್ಯಾರ್ಥಿ ವೇತನ ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದುಯ ವಿದ್ಯಾರ್ಥಿಗಳು ನೀಟ್ ನಲ್ಲಿ ಪಡೆದ ಅಂಕಗಳನ್ನು ಆಧರಿಸಿ ವಿದ್ಯಾರ್ಥಿ ವೇತನ ಕಲ್ಪಿಸಲಾಗುವುದು. ಈ ವಿದ್ಯಾರ್ಥಿ ವೇತನದಿಂದ ಎರಡು ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ.
ಕೊರೊನಾ ಕಾರಣದಿಂದ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಟ್ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ವೆಬ್ ಸೈಟ್ ನಲ್ಲಿ ಉಚಿತವಾಗಿ ಹೆಸರು ನೋಂದಾಯಿಸಿ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬಹುದು. ನೀಟ್ ದೀರ್ಘ ಕಾಲದ ರಿಪೀಟಱ್ಸ್ ಪ್ರವೇಶಕ್ಕೆ ನವೆಂಬರ್ ೧ ಕಡೆಯದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ 1800121623ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಂಸ್ಥೆ ಯಶೋಗಾಥೆ ೩೨ ವರ್ಷಗಳ ಹಿಂದೆ ಕೇವಲ ೧೬ ಮಕ್ಕಳಿಂದ ಆರಂಭವಾದ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಇಂದು ೧೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಒಟ್ಟು ೪೨ ಶಾಖೆಗಳನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣದ ಮೂಲಕ ದ್ವಿತೀಯ ಪಿಯುಸಿ, ಸಿಇಟಿ, ನೀಟ್ ಫಲಿತಾಂಶದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಭಾರಿಯ ನೀಟ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ರಾಷ್ಟ್ರಮಟ್ಟದಲ್ಲಿ ೯ನೇ ಱ್ಯಾಂಕ್ ಮತ್ತು ರಾಜ್ಯಕ್ಕೆ ಪ್ರಥಮ, ಅರ್ಬಾಜ್ ಎಂಬ ವಿದ್ಯಾರ್ಥಿ ರಾಷ್ಟ್ರಮಟ್ಟದಲ್ಲಿ ೮೫ನೇ ಱ್ಯಾಂಕ್ ಮತ್ತು ರಾಜ್ಯಕ್ಕೆ ತೃತೀಯ ಸ್ಥಾನಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದು, ಈ ವಿದ್ಯಾರ್ಥಿಗಳಿಗೆ ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಮಟ್ಟದಲ್ಲಿ ಒಂದು ಪ್ರತಿಶತ ಸೀಟು ಪಡೆಯುವ ಗುರಿ ರಾಷ್ಟ್ರಮಟ್ಟದಲ್ಲಿ ಒಂದು ಪ್ರತಿಶತ ಎಂಬಿಬಿಎಸ್ ಸೀಟು ಪಡೆಯುವ ಗುರಿ ನಮ್ಮದಾಗಿದೆ ಎಂದು ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಹೇಳಿದರು. ಈ ವರ್ಷ ಕಾರ್ತಿಕ್ ರೆಡ್ಡಿ ಎಂಬ ವಿದ್ಯಾರ್ಥಿ ರಾಷ್ಟ್ರಮಟ್ಟದಲ್ಲಿ ೯ನೇ ರ್‍ಯಾಂಕ್‌ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ (ನೀಟ್ ಪರೀಕ್ಷೆಯಲ್ಲಿ) ಪಡೆದಿರುತ್ತಾರೆ.
ಅದೇ ರೀತಿ ಓರ್ವ ಸಾಮಾನ್ಯ ಲಾರಿ ಚಾಲಕನ ಮಗ ಎಂ.ಡಿ.ಅರ್ಬಾಜ್ ದೇಶದಲ್ಲಿ ೮೫ನೇ ರ್‍ಯಾಂಕ್‌ನೊಂದಿಗೆ ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಈ ಇಬ್ಬರು ವಿದ್ಯಾರ್ಥಿಗಳ ಅನುಪಮ ಸಾಧನೆ ನಮಗೆ ಬಹಳಷ್ಟು ಖುಷಿ ತಂದಿದ್ದು, ಇವರಿಬ್ಬರು ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲಿ ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿಸಿದರು.
ಬಡ ಹಾಗೂ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಶಾಲೆಬಿಟ್ಟ ಮಕ್ಕಳಿಗೆ ಎಐಸಿಯು ಯೋಜನೆಯಡಿ ಪ್ರಾಥಮಿಕ ಹಂತದಿಂದ ಪದವಿಯವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ಸಂಸ್ಥೆ ೩೨ ವರ್ಷಗಳಿಂದ ಯಾವುದೇ ಜಾತಿ, ಧರ್ಮ ಎನ್ನದೆ ಸರ್ವರಿಗೂ ಸಮಾನ ರೀತಿಯಲ್ಲಿ ಅದರಲ್ಲೂ ಅತ್ಯಂತ ಕಡು ಬಡತನದಲ್ಲಿ ಬೆಂದು ಬದುಕುತ್ತಿರುವ, ವಿಶೇಷವಾಗಿ
ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಕಾಲೇಜಿನಲ್ಲಿ ಬೈಕ್ ಮತ್ತು ಮೊಬೈಲ್ ಬಳಕೆ ನಿಷೇಧ ಮಾಡಿದ್ದರಿಂದ ವಿದ್ಯಾರ್ಥಿಗಳ ಸಾಧನೆಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ಅಕಾಡೆಮಿ ನಿರ್ದೇಶಕಿ ಡಾ.ಖಮರ್ ಸುಲ್ತಾನ್, ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ ಅರ್ಬಾಜ್, ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ವೈಜನಾಥ, ಮಹ್ಮದ್ ಯುನೂಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.