ಕಲಬುರಗಿ: ವಾಡಿ ಸಮೀಪದ ಲಾಡ್ಲಾಪುರ ಗ್ರಾಮದ ಆರೋಗ್ಯ ಉಪಕೇಂದ್ರ (ಎಎನ್‌ಎಂ)ದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸದೆ ಕಟ್ಟಡದ ಮೇಲಿನ ಕಂಬಕ್ಕೆ ಬಾವುಟ ಬಿಗಿದು ಅವಮಾನ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಎಎನ್‌ಎಂ ಆರೋಗ್ಯ ಉಪಕೇಂದ್ರದ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಕನ್ನಡ ರಾಜ್ಯೋತ್ಸವ ಕಾಟಾಚಾರಕ್ಕೆ ಆಚರಿಸಲಾಗಿದೆ. ಸಂಬಂದಿಸಿದ ಅಧಿಕಾರಿಗಳು ಹಾಜರಿರದೆ ಆಶಾ ಕಾರ್ಯಕರ್ತೆಯೊಬ್ಬರ ಪತಿ ಕಟ್ಟಡದ ಮೇಲೇರಿ ಧ್ವಜ ಕಂಬಕ್ಕೆ ತ್ರೀವರ್ಣ ಬಾವುಟ ಹಗ್ಗದಿಂದ ಬಿಗಿದು ಹೋಗಿದ್ದಾನೆ. ಬಾವುಟ ಉಲ್ಟಾ ಹಾರಾಡುತ್ತಿರುವುದು ಗ್ರಾಮಸ್ಥರ ಕಣ್ಣಿಗೆ ಬಿದ್ದು ಎಡವಟ್ಟು ಬೆಳಕಿಗೆ ಬಂದಿದೆ.
ಹೀಗೆ ಅವಮಾನಕರ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಆರೋಗ್ಯ ಸಿಬ್ಬಂದಿಗಳು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ಆನೇಮಿ, ಕನ್ನಡ ಸಾಹಿತ್ಯ ಪರಿಷತ್ ನಾಲವಾರ ವಲಯ ಗೌರವ ಕಾರ್ಯದರ್ಶಿ ಶಾಂತಕುಮಾರ ಎಣ್ಣಿ ಹಾಗೂ ದಸಂಸ ಸಂಚಾಲಕ ನಾಗರಾಜ ದೇವರಾಳಕರ ದೂರಿದ್ದಾರೆ. ಸಂಬಂದಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.