ವಾಡಿ: ವಿಶ್ವದ ಜ್ಞಾನ ಅರಿತುಕೊಂಡು ಬದುಕಿನ ಕೊಳಕು ತೊಳೆದುಕೊಳ್ಳಲು ಅಕ್ಷರ ಜ್ಞಾನದ ಅವಶ್ಯಕತೆಯಿದೆ. ಶಿಕ್ಷಣಕ್ಕೆ ಮೊದಲ ಅಧ್ಯತೆ ನೀಡಿದರೆ ಮನೆಗೊಬ್ಬ ಮಹಾನಾಯಕ ಭೀಮರಾವ ಹುಟ್ಟುತ್ತಾನೆ ಎಂದು ಯುವ ಸಾಹಿತಿ ಕೆ.ಎಂ.ವಿಶ್ವನಾಥ ಮರತೂರ ಹೇಳಿದರು.
ಕಮರವಾಡಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ದಾರವಾಹಿಯ ಕಟೌಟ್ ಅನಾವರಣ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮಹಾನಾಯಕ ದಾರವಾಹಿ ನೋಡಿಯೂ ಮೌಢ್ಯದಿಂದ ಹೊರಬರದಿದ್ದರೆ ಪ್ರಯೋಜವಿಲ್ಲ. ಮಕ್ಕಳನ್ನು ಶಾಲೆಯಿಂದ ಬಿಡಿಸಿ ಮಹಾನಾಯಕ ಕಟೌಟ್ ಅನಾವರಣಗೊಳಿಸಿದರೆ ಅರ್ಥವಿಲ್ಲ. ಗ್ರಾಮದಲ್ಲಿರುವ ಸರಕಾರಿ ಶಾಲೆಯ ಅಭಿವೃದ್ಧಿಗೆ ಮೊದಲು ಶ್ರಮಿಸಬೇಕು. ಅಲ್ಲಿನ ಶಿಕ್ಷಣ ವ್ಯವಸ್ಥೆ ಸರಿಯಾಗಿರಲು ಹೋರಾಡಬೇಕು. ಸಮಾಜದ ಪ್ರತಿಯೊಬ್ಬ ತಂದೆ ರಾಮಜಿ ಸಕ್ಪಾಲ, ಪ್ರತಿಯೊಬ್ಬ ತಾಯಿ ಭೀಮಬಾಯಿ ಆಗಬೇಕು. ಆಗಮಾತ್ರ ಭೀಮರಾವನಂತಹ ಹೋರಾಟಗಾರ ವಿಶ್ವಜ್ಞಾನಿ ಹುಟ್ಟಲು ಸಾಧ್ಯ ಎಂದು ವಿವರಿಸಿದರು.
ದಲಿತ ಹೋರಾಟಗಾರ ಶಿವಮೂರ್ತಿ ಶಾಸ್ತ್ರೀ ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರರ ಜೀವನ ಮತ್ತು ಹೋರಾಟದ ಕುರಿತು ತಿಳಿದುಕೊಳ್ಳಲು ಸಾಕಷ್ಟು ಸಾಹಿತ್ಯ ಪ್ರಕಟಗೊಂಡಿದೆ. ಆದರೆ ದಾರವಾಹಿ ರೂಪದಲ್ಲಿ ಬಿತ್ತರಗೊಳ್ಳುತ್ತಿರುವ ಮಹಾನಾಯಕ ಗ್ರಾಮೀಣ ಜನರ ಮನತಟ್ಟುವಲ್ಲಿ ಯಶಸ್ವಿಯಾಗಿದೆ. ಇಂತಹ ದಾರವಾಹಿಯ ಪ್ರಸಾರ ತಡೆಯಲು ಕೆಲವರು ಮುಂದಾಗಿದ್ದರು. ಹಿಂದೆ ಎರಡು ದಿನ ದಾರವಾಹಿ ಪ್ರಸಾರ ನಿಂತಿತ್ತು. ಆಗ ಚಿತ್ರ ನಟ ಯಶ್ ಸೇರಿದಂತೆ ಅನೇಕ ಜನ ಪ್ರಗತಿಪರ ಹೋರಾಟಗಾರರು ದಾರವಾಹಿ ಮುಂದುವರೆಯಲು ಕಾರಣರಾದರು ಎಂದು ನೆನಪಿಸಿದ ಶಿವಮೂರ್ತಿ, ಯಾವ ದೇವರುಗಳು ನಮ್ಮನ್ನು ವಿದ್ಯೆ ಕೊಡಲು ಮುಂದೆ ಬರಲಿಲ್ಲ. ಅಂಬೇಡ್ಕರರು ಹಲವು ಕಷ್ಟಗಳ ನಡುವೆ ಅವಮಾನ ಸಹಿಸಿಕೊಂಡು ೧೪ ಪದವಿಗಳನ್ನು ಪಡೆದರು. ಭಾರತ ಸಂವಿಧಾನವೇ ಬರೆದರು. ಅವರು ಬರೆದ ಸಾಹಿತ್ಯ ೨೦೦೦ ಪುಟದಷ್ಟಿದೆ. ಅದನ್ನು ನಾವುಗಳು ಅಧ್ಯಯನ ಮಾಡಬೇಕಿದೆ ಎಂದರು.
ಗ್ರಾಮದ ಹಿರಿಯರಾದ ಅಣ್ಣಪ್ಪಗೌಡ ಪೊಲೀಸ್ ಪಾಟೀಲ ಮಾತನಾಡಿದರು. ಗ್ರಾಪಂ ಸದಸ್ಯೆ ಮಲ್ಲಮ್ಮ ಗಂಗಾನೋರ, ಗ್ರಾಪಂ ಕಾರ್ಯದರ್ಶಿ ಬಸವರಾಜ ಗಂಜಿ, ದಲಿತ ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಭೀಮರಾಯ ಗಂಗಾನೋರ, ಹಣಮಂತ ತಳವಾರ, ಖೇಮಲಿಂಗ ಬೆಳಮಗಿ, ಚೆನ್ನಬಸಪ್ಪ ಭಂಡೇರ, ರವಿ ಕೋಳಕೂರ, ವಿಕ್ರಮ ನಿಂಬರ್ಗಾ, ರಹೆಮಾನಸಾಬ ಬಾಂಬೆ, ಸಾಯಬಣ್ಣ ದೊಡ್ಡಮನಿ, ಬಾಬು ಅಣಕೇರಿ, ಚಂದ್ರಪ್ಪ ಅಮಕಾರ, ಲಕ್ಷ್ಮಣ ಅಮಕಾರ, ಕಾಶೆಪ್ಪ ಅಮಕಾರ, ಶಂಕರ ಗಂಗಾನೋರ, ಚಂದ್ರಕಾಂತ ಗಂಗಾನೋರ, ಸಂತೋಷ ತಿಪ್ಪಣ್ಣೋರ, ಸಿದ್ಧಾರ್ಥ ಗಂಗಾನೋರ, ಬಸವರಾಜ ಯಲಗಟ್ಟಿ, ಮಲ್ಲಿಕಾರ್ಜುನ ಮದನಕರ ಪಾಲ್ಗೊಂಡಿದ್ದರು. ಗುರುಪ್ರಸಾದ ಕರಕನೋರ ಸ್ವಾಗತಿಸಿದರು. ರಾಯಪ್ಪ ಕೊಟಗಾರ ನಿರೂಪಿಸಿದರು. ಶ್ರೀಕಾಂತ ಗಂಗಾನೋರ ವಂದಿಸಿದರು.