ಶಹಾಬಾದ:ಕನ್ನಡ ನಾಡು ನುಡಿ ವಿಶ್ವದಲ್ಲಿಯೇ ಅತ್ಯಂತ ಸಾಕಷ್ಟು ಉತ್ತಮ ಸಂಸ್ಕೃತಿ ಹೊಂದಿದ್ದರೂ ನಾವಿಂದೂ ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾಗುತ್ತಿರುವುದು ವಿಷಾಧನೀಯ ಎಂದು ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಹೇಳಿದರು.
ಅವರು ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತ ವತಿಯಿಂದ ಭಂಕೂರ ಗ್ರಾಮದಲ್ಲಿ ಆಯೋಜಿಸಲಾದ ಕನ್ನಡ ನುಡಿ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ. ಪ್ರತಿಯೊಬ್ಬ ಕನ್ನಡಾಭಿಮಾನಿ ನಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಕಳುಹಿಸುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು. ಕನ್ನಡ ಭಾಷೆ, ಕನ್ನಡ ನುಡಿ, ನೆಲ ಹಾಗೂ ಜಲದ ಬಗ್ಗೆ ಕೇವಲ ನವೆಂಬರ್ ತಿಂಗಳಿಗೆ ಹಾಡೊಕೆ, ಆಡೋಕೆ ಸಿಮೀತವಾಗಿದೆ. ಬಿಲದಿಂದ ಹೊರ ಬರುವ ಇಲಿಗಳಂತೆ ಆಗದೇ ಕನ್ನಡವನ್ನು ಬೆಳೆಸುವಲ್ಲಿ ಕಿಂಚಿತ್ತು ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರದಿಂದಾಗಬೇಕೆಂದು ಹೇಳಿದರು.
ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಮೇಶ ಭಟ್ ಮಾತನಾಡಿ,ಕನ್ನಡದ ಬಗ್ಗೆ ಅಪಹಾಸ್ಯ ಬೇಡ. ಕನ್ನಡದ ಬಗ್ಗೆ ಆಭಿಮಾನ ಅಗತ್ಯ ಎಂದರು. ಕನ್ನಡ ಭಾಷೆಯ ಬೆಳವಣಿಗೆ ಮನೆಯಿಂದ ಅರಂಭವಾಗಬೇಕು. ಆಂಗ್ಲ ಭಾಷೆ ಕಲಿತರೂ ಕನ್ನಡತನ ಬಿಡಬಾರದು. ಮಾತೃಭಾಷೆಯ ಹೆತ್ತ ತಾಯಿಗೆ ಸಮಾನ. ಕೇವಲ ಕವಿಗಳು ಮತ್ತು ಶಿಕ್ಷಕರಿಂದ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದರು.
ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ, ವಿರೇಶ ಮಠಪತಿ, ರಾಘವೇಂದ್ರ ಜಾಯಿ, ಮಕ್ಕಳ ಸಾಹಿತ್ಯ ಪರಿಷತ್ತ ಅಧ್ಯಕ್ಷ ಮರಲಿಂಗ ಯಾದಗಿರಿ, ಹಣಮಂತ ಕುಂಬಾರ ಸೇರಿದಂತೆ ಅನೇಕರು ಇದ್ದರು.