ಕಲಬುರಗಿ; ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜೀಯವರು ಶೈಕ್ಷಣಿಕ ಕೇತ್ರಕ್ಕೆ ನೀಡಿದ ಕೊಡುಗೆಯನ್ನು ಕಂಡು ಪದ್ಮವಿಭೂಷಣ ಪ್ರಶಸ್ತಿ ನೀಡಬೇಕು ಎಂದು ಜಗದ್ಗುರು ಶ್ರೀಶೈಲಂ ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜೀ, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀ ಹಾಗೂ ೯ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜೀರವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದ ಕಲಬುರಗಿ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವಲ್ಲಿನ ಅಪ್ಪಾಜೀಯವರ ಕಾರ್ಯವನ್ನು ಗಮನಿಸಿ ರಾಜ್ಯ ಸರಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಪ್ರಶಸ್ತಿಗಳನ್ನು ಡಾ. ಅಪ್ಪಾಜೀ ಅವರಿಗೆ ಬಹಳ ಹಿಂದೆಯೇ ನೀಡಬೇಕಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ತಪ್ಪನ್ನು ತಕ್ಷಣವೇ ತಿದ್ದುಕೊಳ್ಳಬೇಕು. ಈ ಭಾಗದಲ್ಲಿ ಚುನಾಯಿತ ಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಪದ್ಮವಿಭೂ?ಣ ಪ್ರಶಸ್ತಿಯನ್ನು ತಕ್ಷಣವೇ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿ ರಾಜ್ಯ ಸರ್ಕಾರವು ಸಂಪುಟದಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ.ಅಪ್ಪಾಜೀಯವರಿಗೆ ನೀಡುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. ಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಡಾ.ಅಪ್ಪಾಜಿ ಅವರ ಕೊಡುಗೆ ಅಪಾರವಾಗಿದೆ. ದೂರದೃಷ್ಟಿಯ ಶಿಕ್ಷಣ ತಜ್ಞರು ಈ ಪ್ರದೇಶದ ಜನರಿಗೆ ಶೈಕ್ಷಣಿಕ ಅವಕಾಶಗಳ ಹೊಸ ದೃಷ್ಟಿಕೋನಗಳನ್ನು ತೆರೆಯುವುದಲ್ಲದೆ, ಶರಣ ಬಸವ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದರು.
ಉದ್ಘಾಟನೆ ಭಾಷಣೆ ಮುಂದುವರೆಸುತ್ತಾ ಮಹಾಸ್ವಾಮಿಗಳು, ರಾಜ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಮಾನ್ಯ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪರವರಿಂದ ಮಾತ್ರ ಈ ಕೆಲಸ ಸಾಧ್ಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವುದು ಅಷ್ಟೇ ಅಲ್ಲದೇ ಮುಂದಿನ ಅವಧಿಯನ್ನೂ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶರಣಬಸವೇಶ್ವರ ಸಂಸ್ಥಾನ ಮತ್ತು ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ೭ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಮರಣದ ನಂತರ, ಸಂಸ್ಥಾನ ಮತ್ತು ಸಂಘವು ೪೦,೦೦೦ / – ರೂಗಳ ಸಾಲದ ಹೊರೆ ಹೊಂದಿತ್ತು. ಮುಂದೆ ಡಾ. ಅಪ್ಪಾಜಿ ಅವರು ಎಲ್ಲಾ ಸಾಲವನ್ನು ಹಿಂದಿರುಗಿಸಿ, ಒಂದರ ನಂತರ ಒಂದು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಮತ್ತು ಅಂತಿಮವಾಗಿ ಶರಣಬಸವ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಕ್ರಮೇಣವಾಗಿ ಶಿಕ್ಷಣ ಸಂಸ್ಥೆಯನ್ನು ಬೆಳಸಿದರು ಎಂದು ಶ್ಲಾಘಿಸಿದರು.
ಹೊಸದಾಗಿ ಚುನಾಯಿತರಾದ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಮಾತನಾಡಿ, ಈ ಪ್ರದೇಶದ ಚುನಾಯಿತ ಪ್ರತಿನಿಧಿಗಳು ಸಭೆ ಸೇರಿ ಡಾ. ಅಪ್ಪಾಜೀಯವರಿಗೆ ಶೀಘ್ರದಲ್ಲೇ ಅತ್ಯುನ್ನತ ಗೌರವವನ್ನು ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿಯೋಗವನ್ನು ಹೊರಡಿಸಿ ಡಾ.ಅಪ್ಪಾಜೀಯವರಿಗೆ ಪದ್ಮವಿಭೂ?ಣ ಪ್ರಶಸ್ತಿ ದೊರಕಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ಧರಾಮಪ್ಪ ಪಾಟೀಲ ಧಂಗಾಪೂರ, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಧಯಾಗನ್ ಧಾರವಾಡ್ಕರ್, ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ, ’ಪಯಣ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಯದ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶರಣಬಸವೇಶ್ವ ಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರ ’ಶ್ರೀ ಶರಣಬಸವ ಮಹಾದಾಸೋಹ ದರ್ಶನಂ’ ಮಹಾಕಾವ್ಯ, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ನೀಲಾಂಬಿಕಾ ಪೊಲೀಸ ಪಾಟೀಲ ಅವರು ಸಂಪಾದಿಸಿದ ’ಮಹಾಪ್ರಸಾದಿ’, ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾರವರ ’ಇನ್ ದ ಟ್ರೂ ಸ್ಪೀರಿಟ್ ಆಫ್ ದಾಸೋಹ’ ಗ್ರಂಥ ಬಿಡುಗಡೆಗೊಳಿಸಿದ ನಂತರ ಕೃತಿ ರಚನೆಕಾರರು ಮಾತನಾಡಿದರು.
ಶರಣಬಸವೇಶ್ವರವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು. ಕಾರ್ಯಕ್ರಮದ ಅತಿಥಿಯಾಗಿ ಭಾಗವಿಸಿ ಶ್ರೀ. ಷ.ಬ್ರ. ರಾಜಶೇಖರ ಮಹಾಸ್ವಾಮಿಗಳು ಮಾತನಾಡಿದರು. ವಿಶ್ವವಿದ್ಯಾಲಯದ ಇತರೆ ಪ್ರಾಧ್ಯಾಪಕರು ಪೂಜ್ಯರ ವ್ಯಕ್ತಿತ್ವ ಕುರಿತು ಮಾತನಾಡಿದರು.
ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೀತಾ ಇಂಗಿನಶೆಟ್ಟಿ ಅವರು ಸಂಪಾದಿಸಿದ ’ಮಹಾದಾಸೋಹಿ’ ಎಂಬ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ’ಶರಣ ಸಿರಿ’ ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರೀ ನಿರೂಪಿಸಿದರು. ಡಾ. ಸುರೇಶ ನಂದಗಾಂವ ಸ್ವಾಗತಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಪ್ರಾರ್ಥಿಸಿದರು. ಪ್ರೊ. ಚವ್ಹಾಣ ವಂದಿಸಿದರು.