ಸುರಪುರ: ತಾಲೂಕಿನಾದ್ಯಂತ ವಿತರಿಸುತ್ತಿರುವ ಅನೇಕ ಪಡಿತರ ಅಂಗಡಿಗಳಲ್ಲಿನ ಅಕ್ಕಿ ಮತ್ತಿತರೆ ಧವಸಗಳಲ್ಲಿ ಹುಳು ತುಂಬಿರುವುದರಿಂದ ಅಂತಹ ಅಕ್ಕಿಯನ್ನು ಹೇಗೆ ಪಡೆಯುವುದು ಎಂದು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಬೋನಾಳ ಗ್ರಾಮದಲ್ಲಿನ ಪಡಿತರ ಅಂಗಡಿಯಲ್ಲಿ ಪಕ್ಕದ ಮಂಗಿಹಾಳ ಗ್ರಾಮದ ಜನರು ಪಡಿತರ ತರಲು ಹೋದಾಗ ಪಡಿತರ ಧವಸ ವಿತರಣೆಯ ಅಕ್ಕಿಯಲ್ಲಿ ಹುಳುಗಳು ತುಂಬಿ ಇಡೀ ಚೀಲದ ಅಕ್ಕಿ ಕೆಟ್ಟು ಹೋಗಿರುವುದು ಹಾಗು ಅಂತಹ ಅಕ್ಕಿಯನ್ನೆ ವಿತರಕರು ವಿತರಣೆಗೆ ಮುಂದಾಗಿರುವುದಕ್ಕೆ ಪಡಿತರ ಚೀಟಿದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಡಿತರ ಚೀಟಿದಾರರ ವಿರೋಧಕ್ಕೆ ಗಲಿಬಿಲಿಗೊಂಡ ವಿತರಕರು ಇದು ಕೇವಲ ನಮ್ಮ ಅಂಗಡಿಯಲ್ಲಿನ ಸಮಸ್ಯೆ ಮಾತ್ರವಲ್ಲ ತಾಲೂಕಿನ ಎಲ್ಲಾ ರೇಷನ್ ಅಂಗಡಿಗಳಿಗೆ ಇಂತಹ ಅಕ್ಕಿಯನ್ನೆ ಇಲಾಖೆ ಸರಬರಾಜು ಮಾಡಿದೆ ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶಿಸುತ್ತಿದ್ದಾರೆ.
ಈ ಕುರಿತು ಖಂಡನೆ ವ್ಯಕ್ತಪಡಿಸಿರುವ ಮೂಲನಿವಾಸಿ ಅಂಬೇಡ್ಕರ್ ಸೇನೆಯ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ ಮಾತನಾಡಿ,ಸರಕಾರ ಒಂದೆಡೆ ಜನರಲ್ಲಿ ಅಪೌಷ್ಟಿಕತೆ ಹೋಗಲಾಡಿಸುವುದಾಗಿ ಹೇಳುತ್ತದೆ,ಮತ್ತೊಂದೆಡೆ ಹುಳುಗಳಿಂದ ತುಂಬಿ ಹಾಳಾಗಿರುವ ಅಕ್ಕಿಯನ್ನು ನೀಡುತ್ತದೆ,ಈ ಅಕ್ಕಿ ಪ್ರಾಣಿಗಳು ಕೂಡ ತಿನ್ನುವುದಿಲ್ಲ.ಅಂತಹ ಅಕ್ಕಿಯನ್ನು ಜನರಿಗೆ ನೀಡುತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ರಮವನ್ನು ಖಂಡಿಸುತ್ತೇವೆ,ಅಲ್ಲದೆ ಕೂಡಲೆ ಈ ಎಲ್ಲಾ ಪಡಿತರ ಅಂಗಡಿಗಳಲ್ಲಿನ ಹುಳುಬಿದ್ದ ಅಕ್ಕಿಗಳನ್ನು ಮರಳಿ ಪಡೆದು ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ನೀಡಬೇಕು ಇಲ್ಲವಾದರೆ ಯಾದಗಿರಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.