ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ, ಶಾಸಕರಾದ ಅಜಯಸಿಂಗ್, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಧರಣಿ ಸತ್ಯಾಗ್ರಹ ಬೆಂಬಲಿಸಿ ಸಾಂಕೇತಿಕವಾಗಿ ಧರಣಿಯಲ್ಲಿ ಪಾಲ್ಗೊಂಡರು.
ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಚಾರಿತ್ರಿಕ ಹೋರಾಟಕ್ಕೆ ಬೆಂಬಲಿಸಿ ಹಮ್ಮಿಕೊಂಡಿರುವ ಈ ಧರಣಿ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಜ.೨೮ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ತೊಗರಿ ಬೆಳೆಗಾರರ ಸಮಸ್ಯೆ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ಬೆಂಗಳೂರಿಗೆ ನಿಯೋಗ ಬನ್ನಿ. ವಿರೋಧಿ ಪಕ್ಷದ ನಾಯಕ ಸಿದ್ದರಾಮಯ್ಯ ಇರುತ್ತಾರೆ. ಸರ್ಕಾರದ ಮೇಲೆ ಒತ್ತಡ ಹೇರಲು ಚರ್ಚಿಸೋಣ ಎಂದರು. ರೈತ ವಿರೋಧಿ ಯಡಿಯೂರಪ್ಪ ಸರ್ಕಾರ ಕಿತ್ತೊಗೆಯುವವರೆಗೂ ಒಟ್ಟಾಗಿ ಹೋರಾಡೋಣ. ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಸುನೀಲ ಮಾನಪಡೆ ಅವರು ಮಾತನಾಡಿ ತೊಗರಿಗೆ ೮೭೫೦ ರೂ. ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಖಂಡಿಸಿದರು.
ರೈತರು ಬೆಳೆದಷ್ಟು ತೊಗರಿ ಖರೀದಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲು ಸುನೀಲ ಮಾನಪಡೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಶೋಕ ಮ್ಯಾಗೇರಿ, ಸುಭಾಷ್ ಹೊಸಮನಿ, ಸಿದ್ದು ಹರವಾಳ, ಶಾಂತಪ್ಪ ಪಾಟೀಲ, ಪಾಂಡುರಂಗ ಮಾವಿನಕರ, ಸುಧಾಮ ಧನ್ನಿ, ಮಲ್ಲಣಗೌಡ ಬನ್ನೂರು, ಕಾಶಿನಾಥ್ ಬಂಡೆ,ಸಿದ್ದಲಿಂಗ ಪಾಳ ಮೈಲಾರಿ ದೊಡ್ಮನಿ ಇದ್ದರು.