ಕಲಬುರಗಿ: 2018-19 ನೇ ಸಾಲಿನಲ್ಲಿ ನಡೆದಿರುವ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ರೋಸ್ಟರ್ ಆಯ್ಕೆ ಪಟ್ಟಿಯ ಗೊಂದಲವನ್ನು ನಿವಾರಿಸುವ ಮೂಲಕ ಹೈದ್ರಾಬಾದ್ ಕರ್ನಾಟಕದವರಿಗೆ ನ್ಯಾಯ ಒದಗಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಇಲ್ಲಿ ಒತ್ತಾಯಿಸಿದರು.
ಮಂಗಳವಾರ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ೨೦೧೪-೨೦೧೫ನೇ ಸಾಲಿನಲ್ಲಿ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿ ಅಧಿಸೂಚನೆ ಹೊರಡಿಸಿ ವೃಥಾ ಕಾಲಹರಣ ಮಾಡಿ ೨೦೧೮-೨೦೧೯ನೇ ಜೇಷ್ಠಾತಾ ಪಟ್ಟಿ ಪ್ರಕಟಿಸಿದ್ದು, ಪಟ್ಟಿಯು ತೀವ್ರ ಗೊಂದಲದಿಂದ ಕೂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜೇಷ್ಠಾತಾ ಪಟ್ಟಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಉನ್ನತ ರ‍್ಯಾಂಕ್‌ನಲ್ಲಿದ್ದರೂ ಸಹ ಇಂತಹ ಅಭ್ಯರ್ಥಿಗಳನ್ನು ಇತರೆ ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿಯಲ್ಲಿ ಸೇರಿಸದೇ ಹೈದ್ರಾಬಾದ್ ಕರ್ನಾಟಕದ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಾಕಷ್ಟು ಉಪನ್ಯಾಸಕರ ಕೊರತೆಯಿದ್ದು, ಇದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಈಗಿರುವ ಜೇಷ್ಠಾತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈಗಿರುವಷ್ಟು ಒಟ್ಟು ಹುದ್ದೆಗಳನ್ನ ಸೇರ್ಪಡೆಗೊಳ್ಳುವಂತೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಈ ವಿಷಯದ ಕುರಿತು ಗ್ರಾಮವಾಸ್ತವ್ಯಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡುತ್ತೇವೆ. ಬೇಡಿಕೆ ಈಡೇರಿಸಿದರೆ ಸರಿ ನಿರ್ಲಕ್ಷ ಮಾಡಿದರೆ, ಹೈದ್ರಾಬಾದ್ ಕರ್ನಾಟಕ ಭಾಗದ ೬ ಜಿಲ್ಲೆಗಳ ಅಭ್ಯರ್ಥಿಗಳು ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡುತ್ತೇವೆ ಇಲ್ಲವೇ ಪ್ರತ್ಯೇಕ ರಾಜ್ಯದ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಮೀನಪ್ಪ ಬಿ. ಹೊಸಮನಿ, ನಿಜಲಿಂಗ್ ಎನ್. ದೊಡ್ಡಮನಿ, ಮಾಣಿಕ್ ಹೋಳ್ಕರ್, ಸಂಜೀವಕುಮಾರ್ ಕಂಬಾರ್, ಮಹಾಂತೇಶ್ ಟಿ. ದೊಡ್ಡಮನಿ, ಪ್ರಭಾಕರ್ ಎನ್. ದೊಡ್ಡಮನಿ, ಮಹಾಲಿಂಗಪ್ಪ ಬಿ. ಮಂಗಳೂರು ಮುಂತಾದವರು ಉಪಸ್ಥಿತರಿದ್ದರು.