ವಾಡಿ: ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ಹಾಗೂ ಅಧ್ಯಕ್ಷರು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ನೇಮಕಾತಿ ಸಮಿತಿ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮಾಜಿ ಸಚಿವ, ಹಾಲಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪ್ರಿಯಾಂಕ್, ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸುವವರು ದಿನಾಂಕ ೦೧-೦೪-೨೦೨೦ರ ಒಳಗೆ ಪದವಿ ಹೊಂದಿರಬೇಕು ಎಂದು ತಿಳಿಸಲಾಗಿದ್ದು, ಕಳೆದ ಒಂದು ವರ್ಷದಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ. ಇದರಿಂದ ಸುಮಾರು ಇಪ್ಪತ್ತು ಸಾವಿರ ನಿರುದ್ಯೋಗಿ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದ್ದಾರೆ.
ಸರಕಾರದ ಈ ಅನ್ಯಾಯ ಪ್ರಶ್ನಿಸಿ ಪದವಿ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ದಾವೆ ಹೂಡುವ ಸಾಧ್ಯತೆಗಳಿವೆ. ಇದರಿಂದ ಇಲಾಖೆಯಲ್ಲಿ ಖಾಲಿಯಿರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ತಡವಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕೊನೆಯ ದಿನಾಂಕ ೨೨-೦೨-೨೦೨೧ರ ಒಳಗೆ ಪದವಿ ಪಡೆದಿರುವ ಎಲ್ಲಾ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸರಕಾರಕ್ಕೆ ಮನವಿ ಮಾಡಿದ್ದಾರೆ.