ಕಲಬುರಗಿ: ನಗರವು ಶೈಕ್ಷಣಿಕ ಕೇಂದ್ರ ಬಿಂದುವಾಗಿದೆ. ಆದ್ದರಿಂದ ಸುಮಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಕಲಬುರಗಿ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವುದು, ಲಾಕ್ ಡೌನ್ ಮುಗಿದ ನಂತರ ಶಾಲಾ-ಕಾಲೇಜುಗಳು ಪ್ರಾರಂಭವಾಗಿರುವುದು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರದ ಬಹುತೇಕ ವಿದ್ಯಾರ್ಥಿಗಳು ಬಸ್ ಮೂಲಕ ಪ್ರಯಣಿಸುವವರಿಗೆ ಸರಿಯಾಗಿ ಬಸ್ ಸೌಲಭ್ಯ ಇಲ್ಲದಿರುವುದು ಕಂಡು ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯ ನೀಡುವಂತೆ ಆಗ್ರಹಿಸಿ AIDSO ಜಿಲ್ಲಾ ಸಮಿತಿ ಸಾರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಹಣಮಂತ ಎಸ್.ಹೆಚ್ ಮಾತನಾಡಿ ಚಿತ್ತಾಪೂರ, ಕಾಳಗಿ, ಕಮಲಾಪುರ, ಆಳಂದ, ಜೇವರ್ಗಿ, ಸೇಡ್ಂ, ಅಫಜಲಪುರ, ಚಿಂಚೋಳಿ, ಯಡ್ರಾಮಿ, ಶಾಹಾಬಾದ, ಮಾರ್ಗದಿಂದ ಬರುವ ಸುಮಾರು ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಹಾಗೂ ಅವಶ್ಯಕತೆಗೆ ತಕ್ಕಷ್ಟು ಬಸ್ ಸೌಲಭ್ಯ ಇಲ್ಲದೆ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ನಗರದ ಶಾಲಾ-ಕಾಲೇಜಿಗೆ ಬರುವುದಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿ, ಪ್ರತಿಭಟನೆಯಲ್ಲಿ ಇಲಾಖೆಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಇಲಾಖೆಯ ಅಧಿಕಾರಿಗಳಾದಕೊಟ್ರಪ್ಪ ರವರು ಸಮಸ್ಯೆ ಕಂಡು ಬಂದ ಎಲ್ಲಾ ಹಳ್ಳಿಗಳಿಗೂ ಹಾಗೂ ನಗರದ ಇತರೆ ಬಡಾವಣೆಗಳಿಗೂ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದು, ಸಮಸ್ಯೆಗಳನ್ನು ಬಗೆಹರಿಸದ್ದಿದಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸುವುದಾಗಿ ಸಂಘಟನೆಯ ಕಾರ್ಯದರ್ಶಿ ಈರಣ್ಣಾ ಇಸಬಾ ಎಚ್ಚರಿಕೆ ನೀಡಿದ್ದಾರೆ.
ಸ್ನೇಹಾ ಕಟ್ಟಿಮನಿ, ಶಿಲ್ಪಾ ಬಿ.ಕೆ, ಗೋಧಾsವರಿ, ನಾಗರಾಜ, ಭೀಮಾಶಂಕರ್, ಪ್ರೀತಿ ದೊಡ್ಡಮನಿ ಮತ್ತು ವಿದ್ಯಾಥಿಗಳಾದ ಅಂಬಿಕಾ, ಆಶಾ, ಭಾಗ್ಯಶ್ರೀ, ಸ್ವಾತಿ, ಅನ್ನಪೂರ್ಣ ಅಶ್ವಿನಿ ಹಾಗೂ ನೂರಾರು ವಿದ್ಯಾಥಿಗಳು ಭಾಗವಹಿಸಿದ್ದರು.