ಶಹಾಬಾದ:ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿ ತಮ್ಮ ತತ್ವಾದರ್ಶಗಳ ಮೂಲಕ ಮನೆಮಾತಾದವರು ಅಣ್ಣ ಬಸವಣ್ಣ. ೧೨ನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮುಖೇನ ಕಾಯಕವೇ ಕೈಲಾಸ ಎಂದು ಸಾರಿದ ಬಸವೇಶ್ವರ ಪ್ರತಿಮೆ ಸ್ಥಾಪನೆ ಮಾಡುವ ಕೆಲಸ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದ ಸುಮಾರು ೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.ಅಲ್ಲದೇ ವಿಳಂಬವಾಗುತ್ತಿರುವುದರಿಂದ ಬಸವ ಅನುಯಾಯಿಗಳಿಗೆ ಎಲ್ಲಿಲ್ಲದ ಅಸಮಾಧಾನ ಉಂಟಾಗಿದೆ.
೨೦೧೫-೧೬ ಎಸ್‌ಎಫ್‌ಸಿ ೧೫ ಲಕ್ಷ ರೂ. ಅನುದಾನದಲ್ಲಿ ಬಸವೇಶ್ವರ ಅಶ್ವಾರೂಢ ಪ್ರತಿಮೆ ಬಸವೇಶ್ವರ ವೃತ್ತದ ಸಮೀಪ ನಿರ್ಮಾಣ ಮಾಡಲು ನಗರಸಭೆಯ ಸಾಮನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರು.ಅದರಂತೆ ಬಸವೇಶ್ವರ ಮೂರ್ತಿಯ ಅಡಿಗಲ್ಲು ನಿರ್ಮಾಣಕ್ಕೆ ಸುಮಾರು ೫ ಲಕ್ಷ ರೂ.ಅನುದಾನದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು.ಆಗ ಲೋಕೋಪಯೋಗಿ ಇಲಾಖೆಯವರು ತಮ್ಮ ಸ್ಥಳದಲ್ಲಿ ಬರುತ್ತದೆ ಎಂದು ಹೇಳಿದಾಗ, ಕಾಮಗಾರಿಯನ್ನು ನಿಲ್ಲಿಸಲಾಯಿತು.ಅಲ್ಲಿಂದ ಸುಮಾರು ೬ ವರ್ಷಗಳಾಯಿತು ಜನಪ್ರತಿನಿಧಿಗಳು, ಮುಖಂಡರು ಕೇವಲ ದೊಡ್ಡ ಆಶ್ವಾಸನೆ ನೀಡುತ್ತಲೇ ಬರುತ್ತಿದ್ದಾರೆ ಹೊರತು ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಅಲ್ಲದೇ ಯಾವಾಗ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆ ಎಂದು ಬಕ ಪಕ್ಷಿಯಂತೆ ಜನರು ಕಾಯುತ್ತ ಕುಳಿತಿದ್ದಾರೆ.
ನಗರಸಭೆಯ ಅಂದಿನ ಅಧ್ಯಕ್ಷರಾಗಿದ್ದ ಗಿರೀಶ ಕಂಬಾನೂರ ಅವರ ಅವಧಿಯಲ್ಲಿ ಅನುದಾನ ಕಾಯ್ದಿರಿಸಲಾಗಿತ್ತು. ಈಗ ಮತ್ತೆ ಅವರ ಧರ್ಮ ಪತ್ನಿ ನಗರಸಭೆಯ ಅಧ್ಯಕ್ಷರಾಗಿದ್ದಾರೆ.ಅಂದು ಅವರ ಅವಧಿಯಲ್ಲಿ ಅವರಿಂದಾಗದ ಕೆಲಸವನ್ನು ಅವರ ಪತ್ನಿ ಅಂಜಲಿ ಕಂಬಾನೂರ ಅವಧಿಯಲ್ಲಾದರೂ ಮಾಡಬೇಕೆಂದು ಜನರ ಆಗ್ರಹವಾಗಿದೆ.ಅಲ್ಲದೇ ಅಂದು ಕಾಯ್ದಿರಿಸಿದ ಅನುದಾನದಲ್ಲಿ ಈಗ ಪ್ರತಿಮೆ ಮಾಡಲು ಸಾಧ್ಯವಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಅದಕ್ಕಾಗಿ ಸುಮಾರು ೩೫ ಲಕ್ಷ ರೂ. ಕ್ರೀಯಾಯೋಜನೆ ಮಾಡಲಾಯಿತು. ೧೪ ಅಡಿ ಎತ್ತರದ ಪಂಚಲೋಹದ ಅಶ್ವಾರೂಢ ಪ್ರತಿಮೆಗೆ ನಿರ್ಮಾಣ ಮಾಡಲು ಈಗಾಗಲೇ ನಗರಸಭೆಯ ಸಾಮನ್ಯ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಸಮ್ಮುಖದಲ್ಲಯೇ ನಗರಸಭೆಯ ಅನುದಾನದಲ್ಲಿ ಹೆಚ್ಚುವರಿಯಾಗಿ ಸುಮಾರು ೨೦ ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ.ಆದರೂ ಈ ಕೆಲಸ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. ನಗರದಲ್ಲಿ ದೊಡ್ಡ ಸಮಾಜದವಾದ ಎನಿಸಿಕೊಳ್ಳುವ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಏನು ಮಾಡುತ್ತಿದ್ದಾರೆ.ಸಮಾನತೆಗಾಗಿ ಹೋರಾಡಿದ ಅಣ್ಣ ಬಸವಣ್ಣನ ಮೂರ್ತಿಗಾಗಿ ಇಷ್ಟೊಂದು ವಿಳಂಬ ನೀತಿ ಅನುಸರಿಸಿದರೇ ಹೇಗೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಇದಕ್ಕೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಶಾಸಕರೇ ಉತ್ತರ ನೀಡಬೇಕಾಗಿದೆ ಮತ್ತು ಯಾವಾಗ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.ಅಲ್ಲದೇ ಮುಂಬರುವ ಬಸವೇಶ್ವರ ಜಯಂತಿಯೊಳಗಾಗಿ ಮೂರ್ತಿ ಸ್ಥಾಪನೆಯದರೇ ಮಹದುಪಕಾರವಾಗುತ್ತದೆ ಎಂಬುದು ಬಸವ ಅನುಯಾಯಿಗಳ ಅಂಬೋಣವಾಗಿದೆ.
ಬಸವೇಶ್ವರ ಮೂರ್ತಿ ಪ್ರತಿಷ್ಠಾನೆಗೆ ಅನುದಾನದ ಕೊರತೆಯಿದೆ ಎಂದು ಗಮನಕ್ಕೆ ತಂದಾಗ, ನಗರಸಭೆಯ ಸಾಮನ್ಯ ಸಭೆಯಲ್ಲಿ ಚರ್ಚೆ ಮಾಡಿ, ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ನಗರಸಭೆಯ ಅನುದಾನದಲ್ಲಿ ಸುಮಾರು ೨೦ ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಅಧಿಕಾರಿಗಳಿಗೆ ಬೇಟಿ ಮಾಡಿ, ಕೆಲಸ ಪ್ರಾರಂಭಿಸಲು ಸಮಾಜದ ಮುಖಂಡರು ಮುಂದಾದಬೇಕಿದೆ- ಬಸವರಾಜ ಮತ್ತಿಮಡು ಶಾಸಕರು ಕಲಬುರಗಿ ಗ್ರಾಮೀಣ ಮತಕ್ಷೇತ್ರ.
ಈಗಾಗಲೇ ನಗರಸಭೆಯ ಅನುದಾನದಲ್ಲಿ ಹೆಚ್ಚುವಾರಿಯಾಗಿ ೨೦ ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಒಂದು ವಾರದಲ್ಲಿ ಸಮಾಜದ ಮುಖಂಡರ ನಿಯೋಗದೊಂದಿಗೆ ಮೂರ್ತಿ ವಿಕ್ಷಿಸಲು ಪೂನಾಗೆ ತೆರಳಲಿದ್ದೆವೆ.ಕಾಮಗಾರಿ ಆದಷ್ಟು ಶೀಘ್ರವೇ ಪ್ರಾರಂಭಿಸಲಾಗುವುದು-ಡಾ.ಕೆ.ಗುರಲಿಂಗಪ್ಪ ಪೌರಾಯುಕ್ತರು ನಗರಸಭೆ ಶಹಾಬಾದ.