ಕಲಬುರಗಿ: ರಾಜ್ಯ ಸರಕಾರವು ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಪ್ರಸಕ್ತ ಮಾರ್ಚ್‌ನಲ್ಲಿ ನಡೆಯಲಿರುವ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿ, ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಆಯೋಗವು ಒಳ ಮೀಸಲಾತಿ ಜಾರಿಗೊಳಿಸುವುದು, ರಾಜ್ಯ ಸರಕಾರದ ವ್ಯಾಪ್ತಿಯಲ್ಲಿಲ್ಲ. ಅಂತಿಮವಾಗಿ ಸಂಸತ್ತಿನ ಸಂವಿಧಾನದ ಪರಿಚ್ಛೇದ 341ರ (2) ರ ಪ್ರಕಾರ ಅನುಮೋದನೆಗೊಂಡು ಪರಿಚ್ಛೇದ 341(3) ರ ತಿದ್ದುಪಡಿಗಾಗಿ ವರದಿ ಶಿಫಾರಸು ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಇಲ್ಲಿಯವರೆಗೂ ಈ ವರದಿ ಶಾಸನ ಸಭೆಯಲ್ಲಿ ಮಂಡನೆಯಾಗಿಲ್ಲ. ಈ ವರದಿಯನ್ನು ಕೆಲ ಸಂಘಟನೆಗಳು ಅವೈಜ್ಞಾನಿಕ ಎಂದು ದೂರುತ್ತಿರುವುದು ಸರಿಯಲ್ಲ. ಆದರೆ, ಒಳ ಮೀಸಲಾತಿಗೆ ಆಗ್ರಹಿಸುತ್ತಿರುವ ಬಗ್ಗೆ ನಾವು ಯಾವುದೇ ಟೀಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಮಾದಿಗ ಮಹಾಸಭಾಕ್ಕೆ ಕೊಟ್ಟಿರುವ ಮಾತಿನಂತೆ ನ್ಯಾ.ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು.
ಪರಿಶಿಷ್ಟ ಜಾತಿಯಲ್ಲಿ ಮೊದಲು ಅಸ್ಪೃಶ್ಯ ಜಾತಿಗಳು ಮಾತ್ರ ಇದ್ದವು. ಬಳಿಕ ಲಂಬಾಣಿ, ಬಂಜಾರ, ಭೋವಿ (ವಡ್ಡರ), ಕೊರಮ, ಕೊರಚ ಜಾತಿಗಳು ಸೇರಿಕೊಂಡು ಅಸ್ಪೃಶ್ಯ ಜಾತಿಗಳ ಮೀಸಲಾತಿ ಸೌಲಭ್ಯವನ್ನು ಕಬಳಿಸುತ್ತಿವೆ. ಇದರಿಂದ ಅಸ್ಪೃಶ್ಯ ಜಾತಿಗಳಿಗೆ ಸೌಲಭ್ಯ ಹಂಚಿಕೆಯಲ್ಲಿ ತಾರತಮ್ಯ ಅನ್ಯಾಯವಾಗುತ್ತಿದೆ. ಸ್ಪರ್ಶ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.